ಹನೂರು: ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಯನ್ನು ಹೆಚ್ಚಳ ಮಾಡಬೇಕೆಂದು ಪ್ರಸನ್ನಾನಂದ ಪುರಿ ಸ್ವಾಮೀಜಿಗಳು ನಿರಂತರ 260 ಕ್ಕೂ ಹೆಚ್ಚು ದಿನಗಳ ಅನಿರ್ದಿಷ್ಟ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದೆ ಇರುವುದು ಖಂಡನೀಯ ಎಂದು ಸಮುದಾಯದ ಮುಖಂಡ ಪಾಳ್ಯ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಏರ್ಪಡಿಸಲಾಗಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಡನೆ ಮಾತನಾಡಿದರು.
ವಾಲ್ಮೀಕಿ ಸಮುದಾಯದ ಜನತೆಯ ಅನುಕೂಲಕ್ಕೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಜಾರಿ ಮಾಡುವಂತೆ ಫ್ರೀಡಂ ಪಾರ್ಕ್ ನಲ್ಲಿ ಶ್ರೀಗಳು ಸಮುದಾಯದ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಸರ್ಕಾರ ಇದಕ್ಕೆ ಸ್ಪಂದಿಸುತ್ತಿಲ್ಲ. ಹೀಗಾಗಿ ನಾವು ಸರ್ಕಾರದಿಂದ ಆಚರಿಸಲಾಗುವ ವಾಲ್ಮೀಕಿ ಜಯಂತಿ ಆಚರಣೆಯನ್ನು ಪಕ್ಷಾತೀತವಾಗಿ ಬಹಿಷ್ಕರಿಸುತ್ತೇವೆ. ಇದೇ ತಿಂಗಳ 9ರಂದು ಸ್ವಾಮೀಜಿಗಳು ಕರೆಕೊಟ್ಟಿರುವ ಹಿನ್ನಲೆಯಲ್ಲಿ ಮಹಿಳೆಯರು, ಮಕ್ಕಳ ಹಾದಿಯಾಗಿ ಸಮುದಾಯದ ಎಲ್ಲ ಜನತೆ ಬೆಂಗಳೂರು ಚಲೋ ಕಾರ್ಯಕ್ರಮವನ್ನು ಕೈಗೊಂಡಿದ್ದೇವೆ. ಸರ್ಕಾರದಿಂದ ಆಚರಿಸಲಾಗುವ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳಾದ ಜಗದೀಶ್ ನಾಯಕ, ಚಂಗವಾಡಿ ರಾಚಪ್ಪ, ಅನಿಲ್, ಶಿವರಾಮು, ವೆಂಕಟಾಚಲ, ಮಂಜು, ಉದ್ದನೂರು ಸಿದ್ದರಾಜು ಸೇರಿದಂತೆ ಇನ್ನಿತರೆ ಮುಖಂಡರುಗಳು ಉಪಸ್ಥಿತರಿದ್ದರು.





