ಹನೂರು: ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಪ್ರತಿ ವರ್ಷ ಅಕ್ಟೋಬರ್ 2 ರಂದು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ಪಪಂ ಉಪಾಧ್ಯಕ್ಷ ಗಿರೀಶ್ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಹಿಂಸೆಯೇ ಗಾಂಧಿಜೀಯವರ ಅಸ್ತ್ರವಾಗಿತ್ತು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸಲು ಅವರ ಜನ್ಮದಿನವಾದ ಅಕ್ಟೋಬರ್ 2 ಅನ್ನು ರಾಷ್ಟ್ರೀಯ ರಜಾದಿನವೆಂದು ಗುರುತಿಸಲಾಗಿದೆ. ವಿಶ್ವಸಂಸ್ಥೆಯು ಗಾಂಧಿ ಜಯಂತಿಯನ್ನು ‘ಅಂತರಾಷ್ಟ್ರೀಯ ಅಹಿಂಸಾ ದಿನ’ ಎಂದು ಆಚರಿಸಿ ಮಹಾತ್ಮ ಗಾಂಧಿಗೆ ತಮ್ಮ ಗೌರವ ನಮನಗಳನ್ನು ಸಲ್ಲಿಸುತ್ತದೆ. ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಯವರು 17 ತಿಂಗಳ ಕಾಲ ಪ್ರಧಾನಿಯಾಗಿದ್ದರೂ ಕೂಡ ಅವರು ಮಾದರಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಜೈ ಜವಾನ್ ಜೈ ಕಿಸಾನ್, ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ, ಹಮಾರಾ ದೇಶ್ ರಹೇಗಾ ತೋ, ಹಮಾರಾ ತಿರಂಗಾ ರಹೇಗಾ’ ಘೋಷಣೆ ಸ್ಮರಣೀಯವಾದದ್ದು, ಎರಡನೇ ಜಾಗತಿಕ ಸಮರದ ನಂತರ ಭುಗಿಲೆದ್ದ ಅತಿ ದೊಡ್ಡ ಸಂಘರ್ಷವಾದ 1965 ರ ಪಾಕಿಸ್ತಾನ ಮತ್ತು ಭಾರತ ಯುದ್ಧ ಸಂದರ್ಭದಲ್ಲಿ ಅವರು ದೇಶ ರಕ್ಷಣೆಗೆ ತೆಗೆದುಕೊಂಡ ನಿರ್ಧಾರಗಳು ಶ್ಲಾಘನೀಯವಾದದ್ದು ಎಂದರು.

ಹನೂರು ಪಟ್ಟಣದ ತಹಸಿಲ್ದಾರ್ ಕಚೇರಿ, ಪ.ಪಂ. ಹಾಗೂ ತಾ.ಪಂ.ಕಾರ್ಯಾಲಯ, ಆರಕ್ಷಕ ಠಾಣೆ, ಅಗ್ನಿಶಾಮಕ ದಳ, ರೈತ ಸಂಪರ್ಕ ಕೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳು, ಸರ್ಕಾರಿ ಮತ್ತು ಖಾಸಗಿ ಶಾಲೆ ಕಾಲೇಜುಗಳು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿ ಮಹನೀಯರಿಗೆ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಪಂ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಹರೀಶ್ ಕುಮಾರ್’ ಸದಸ್ಯರುಗಳಾದ ಸುದೇಶ್, ಸಂಪತ್ ಕುಮಾರ್ ಪಪಂ ಮಾಜಿ ಉಪಾಧ್ಯಕ್ಷ ಬಸವರಾಜು ಮುಖಂಡ ರಾಜೇಶ್ ಉಪಸ್ಥಿತರಿದ್ದರು.





