ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನ್ಯಾ.ನಾಗಮೋಹನ್ ದಾಸ್ ಸಮಿತಿ ರಚನೆ
ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ವಾಸ್ತವವಾಗಿ ಮೀಸಲಾತಿ ವಿರೋಧಿ ಆಗಿರುವ ಬಿಜೆಪಿ ರಾಜಕೀಯ ಲಾಭ ಪಡೆಯಲು ಹೆಚ್ಚಳದ ತೀರ್ಮಾನ ಕೈಗೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ನಗರದಲ್ಲಿ ವಿವಿಧ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮೀಸಲಾತಿಯನ್ನು ವಿರೋಧ ಮಾಡಿಕೊಂಡು ಬಂದು ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧ ಆಡಳಿತ ಮಾಡುತ್ತಿದ್ದಾರೆ. ಈಗ ಮೀಸಲಾತಿ ಬಗ್ಗೆ ಒಲವು ತೋರಿ ಹೆಚ್ಚಳ ಮಾಡಿರುವುದು ರಾಜಕೀಯ ತಂತ್ರಗಾರಿಕೆಯೇ ಹೊರತು ಬೇರೇನೂ ಇಲ್ಲ ಎಂದು ಟೀಕಿಸಿದರು. ಮೀಸಲಾತಿ ಹೆಚ್ಚಳಕ್ಕೆ ನಾವೇ ಕಾರಣರು. ಮೀಸಲಾತಿ ಪರವಾಗಿ ಕಾಂಗ್ರೆಸ್ ನಿಂತಿರುವ ಕಾರಣದಿಂದಲೇ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗವನ್ನು ರಚನೆ ಮಾಡಲಾಗಿತ್ತು. ಅಂದು ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು.
ಕಾಂಗ್ರೆಸ್ ಪಕ್ಷದಿಂದ ಸಮಾಜ ಕಲ್ಯಾಣ ಸಚಿವರಾಗಿದ್ದ ಪ್ರಿಯಾಂಕ ಖರ್ಗೆ ಒತ್ತಡ ಹಾಕಿದ ಫಲವಾಗಿ ಸಮಿತಿ ರಚನೆಯಾಯಿತು. ಪ್ರತಿ ಸಭೆಯಲ್ಲೂ ಕಾಂಗ್ರೆಸ್ ಶಾಸಕರು ಧ್ವನಿ ಎತ್ತುತ್ತಿದ್ದರು. ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಶ್ನಿಸುತ್ತಿದ್ದರು. ಆಗೆಲ್ಲಾ ಬಿಜೆಪಿ ಶಾಸಕರು ಯಾವುದೇ ಚಕಾರ ಎತ್ತದೇ ಮೌನವಾಗಿರುತ್ತಿದ್ದರು ಎಂದು ಹೇಳಿದರು. ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿ ನೀಡಿ ಎರಡುವರ್ಷದ ಮೂರು ತಿಂಗಳು ಕಳೆದ ಮೇಲೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಸರ್ಕಾರ ಆಗಲೇ ಮೀಸಲಾತಿ ಹೆಚ್ಚಳ ಮಾಡದೇ ಇಷ್ಟು ದಿನ ಏಕೆ ಸುಮ್ಮನಿತ್ತು? ಈಗ ತರಾತುರಿಯಲ್ಲಿ ಮೀಸಲಾತಿ ಜಾಸ್ತಿ ಮಾಡುವುದರ ಉದ್ದೇಶವೇನು? ಎಂಬುದು ಎಲ್ಲರಿಗೂ ಅರ್ಥವಾಗಿದೆ ಎಂದು ನುಡಿದರು. ಬಿಜೆಪಿ ಮೊದಲಿನಿಂದಲೂ ಸಂವಿಧಾನದ ಪರವಾಗಿ ಇಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಬೇಕು ಎನ್ನುವ ವಿಚಾರ ಬಂದಾಗ ರಥಾಂತ್ರೆವಾಡಿದ್ದು ಯಾರು ಎಂಬುದು ಜನರಿಗೆ ಗೊತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.