Mysore
23
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ಆಹಾರ, ಆರೋಗ್ಯ, ಶಿಕ್ಷಣ ಕ್ಷೇತ್ರ ಸಂಪೂರ್ಣ ಕಡೆಗಣನೆ: ವಿಶ್ವನಾಥ್ ವಾಗ್ದಾಳಿ

‘ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ಕಡೆಗಣಿಸಿ ಉಳ್ಳವರ ಪರವಾಗಿ ನಿಲ್ಲುತ್ತಿದೆ’

ಮೈಸೂರು: ಆಹಾರ, ಆರೋಗ್ಯ, ಶಿಕ್ಷಣ ಕ್ಷೇತ್ರ ಸುಭಿಕ್ಷವಾಗಿದ್ದಾಗ ದೇಶ ಅಭಿವೃದ್ಧಿಯಾಗುತ್ತದೆ. ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಕ್ಷೇತ್ರಗಳನ್ನು ಕಡೆಗಣಿಸಿ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಬಜೆಟ್ ಮಂಡಿಸಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಈ ಕ್ಷೇತ್ರಗಳಿಗೆ ಅನುದಾನ ಕಡಿಮೆ ಮಾಡುತ್ತಾ ಬಂದಿದೆ. ಮೋದಿ ಪ್ರಧಾನಿ ಆದ ಮೇಲೆ ಅಲ್ಪಸಂಖ್ಯಾತ ಶಾಲೆಗಳಿಗೆ ಅನುದಾನ ಸಿಗುತ್ತಿಲ್ಲ. ಇದು ಅಲ್ಪಸಂಖ್ಯಾತರು ಮಾತ್ರವಲ್ಲದೆ ಭಾರತದ ಅಭಿವೃದ್ಧಿಗೂ ಹೊಡೆತ ನೀಡುತ್ತಿದೆ. ನಮಗೆ ಬೇಕಿರುವುದು ಮೂಲ ಸೌಲಭ್ಯವೇ ಹೊರತು, ವಿಮಾನ ನಿಲ್ದಾಣಗಳಲ್ಲ. ಕಳೆದ  5 ವರ್ಷಗಳಲ್ಲಿ ದೇಶದ ಅಭಿವೃದ್ಧಿ ದರ ಕಡಿಮೆಯಾಗುತ್ತಲೆ ಇದೆ. ಜನಸಾಮಾನ್ಯರನ್ನು ಕಡೆಗಣಿಸಿರುವ ಸರ್ಕಾರ ಉಳ್ಳವರ ಪರವಾಗಿ ನಿಲ್ಲುತ್ತಿದೆ. ಇದೇನಾ ನಿಮ್ಮ ಅಭಿವೃದ್ಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಏಕೆ ಸುಮ್ಮನಿದ್ದೀರಿ?: 305 ಕೋಟಿ ರೂ. ಲಾಭದಲ್ಲಿರುವ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಮುಚ್ಚಲು ಸರ್ಕಾರ ಹೊರಟಿದೆ. ಕಾರ್ಖಾನೆಯಲ್ಲಿ ಈಗಲೂ 220 ಖಾಯಂ ನೌಕರರಿದ್ದು, ಸಾವಿರಾರು ಮಂದಿ ಅರೆಕಾಲಿಕ ನೌಕರರು ದುಡಿಯುತ್ತಿದ್ದಾರೆ. ಹೀಗಿದ್ದರೂ ಮುಚ್ಚಲು ಹೊರಟಿರುವುದು ಏಕೆ? ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿ.ವೈ. ವಿಜೆಯೇಂದ್ರ ಏನು ಮಾಡುತ್ತಿದ್ದಾರೆ? ನೀವೇನಾದರೂ ಭೂಮಿ ಲಪಟಾಯಿಸಲು ನೋಡುತ್ತಿದ್ದೀರಾ? ಸರ್ಕಾರಿ ಭೂಮಿ ಲಪಟಾಯಿಸುವುದರಲ್ಲಿ ನೀವು ನಿಸ್ಸೀಮರು. ಮೋದಿ ಹಾಗೂ ಅಮಿತ್ ಶಾ ಸೇರಿಕೊಂಡು ಕರ್ನಾಟಕದ ಎಲ್ಲ ಆಸ್ತಿಗಳನ್ನು ಒಂದೊಂದಾಗಿ ಗುಜರಾತ್‌ನ ಮಾರ್ವಾಡಿಗಳಿಗೆ ಕೊಡುತ್ತಿದ್ದಾರೆ. ಭದ್ರಾವತಿ ವಿಧಾನಸಭೆ ಕ್ಷೇತ್ರದಲ್ಲಿ ಇದುವರೆಗೂ ಒಮ್ಮೆಯೂ ಬಿಜೆಪಿ ಗೆದ್ದಿಲ್ಲ. ಹಾಗಾಗಿ ಭದ್ರಾವತಿ ಕಂಡರೆ ಬಿಜೆಪಿಯವರಿಗೆ ಆಗುವುದಿಲ್ಲ. ಫೆ.27ಕ್ಕೆ ಶಿವಮೊಗ್ಗಕ್ಕೆ ಮೋದಿ ಬರುತ್ತಿದ್ದು, ಅಲ್ಲಿನ ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಈ ಬಗ್ಗೆ ಪ್ರಶ್ನೆ ಮಾಡಬೇಕು ಎಂದು ಹೇಳಿದರು.

ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಒಂದೊಂದಾಗಿ ದೇಶದ ಕಾರ್ಖಾನೆಗಳನ್ನು ಮುಚ್ಚುತ್ತಿದ್ದಾರೆ. ಸೇಲಂನಲ್ಲಿ ಇದೇ ರೀತಿಯ ಕಾರ್ಖಾನೆ ಮುಚ್ಚಲು ಮುಂದಾದಾಗ ಅಲ್ಲಿನ ಜನತೆ, ಸಂಸದರು ತಿರುಗಿ ಬಿದ್ದಿದ್ದರಿಂದ ಕಾರ್ಖಾನೆ ಪುನಾರಂಭವಾಗಿದೆ. ಆ ತಾಕತ್ತು ನಮ್ಮ ಮುಖ್ಯಮಂತ್ರಿ, ಸಂಸದರಿಗೆ ಯಾಕಿಲ್ಲ ಎಂದು ಪ್ರಶ್ನಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!