ಕಲಬುರಗಿ : ಭ್ರಷ್ಟಾಚಾರ ಮಾಡಿ, ಜನ ವಿರೋಧಿ ಆಡಳಿತ ನಡೆಸಿರುವ ಬಿಜೆಪಿಗೆ ವಿಧಾನಸಭೆ ಚುನಾವಣೆ ಎದುರಿಸಲು ಭಯವಾಗಿ, ಪದೇ ಪದೇ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಕರೆಸಿ ಪ್ರಚಾರ ಮಾಡುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಸಮಾವೇಶಗಳನ್ನು ನೋಡಿ ಕಾಂಗ್ರೆಸ್‍ಗೆ ಯಾವ ಭಯಗಳು ಇಲ್ಲ. ಭಯ ಶುರುವಾಗಿರುವುದು ಬಿಜೆಪಿಯವರಿಗೆ. ಅದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ವಾರಕ್ಕೊಮ್ಮೆ ಕರೆಸುತ್ತಿದ್ದಾರೆ. ಅಮಿತ್ ಶಾ, ಜೆ.ಪಿ.ನಡ್ಡಾರನ್ನು ಪದೇ ಪದೇ ಕರೆಸುತ್ತಿದ್ದಾರೆ. ನಿಜವಾಗಲು ಅವರಿಗೆ ಭಯ ಶುರುವಾಗಿದೆ ಎಂದು
ತಿರುಗೇಟು ನೀಡಿದರು. ಬಿಜೆಪಿ ಸರ್ಕಾರವನ್ನು ಕಿತ್ತೋಗೆಯಬೇಕು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇವರ ಆಡಳಿತದಲ್ಲಿ ಒಂದು ಮನೆಯನ್ನು ಮಂಜೂರು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಈ ರೀತಿಯ ರಾಷ್ಟ್ರೀಯ ನಾಯಕರ ಮೊರೆ ಹೋಗಿದ್ದಾರೆ ಎಂದು ಲೇವಡಿ ಮಾಡಿದರು.
ರಾಹುಲ್‍ಗಾಂಧಿ, ಪ್ರಿಯಾಂಕ ಗಾಂಧಿ ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತಿದೆ. ಅದಕ್ಕಾಗಿ ಬಿಜೆಪಿ ನಾಯಕರು ಬರುವುದನ್ನು ಕಾಂಗ್ರೆಸ್ ಟೀಕಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಬಿಜೆಪಿ ನಾಯಕರು ಹೋದ ಕಡೆಯಲ್ಲೆಲ್ಲಾ ಗೆದ್ದಿದ್ದಾರಾ. ಬಿಜೆಪಿ ಎಷ್ಟು ರಾಜ್ಯಗಳಲ್ಲಿ ಆಡಳಿತದಲ್ಲಿದೆ. ಪಶ್ಚಿಮ ಬಂಗಾಳದಲ್ಲಿ, ದೆಹಲಿ, ಹರ್ಯಾಣ, ಬಿಹಾರ, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಯಾಕೆ ಗೆಲ್ಲಲು ಸಾಧ್ಯವಾಗಿಲ್ಲ. ಬಿಜೆಪಿಯಂತೆ ಕಾಂಗ್ರೆಸ್ ಕೂಡ ನಾಲ್ಕೈದು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಅವರ ಟೀಕೆಗಳು ಅರ್ಥ ಹೀನ ಎಂದು ಟೀಕಿಸಿದರು.
ಬಿಜೆಪಿ ದುರಾಡಳಿತದಿಂದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈಗಾಗಲೇ 10 ಜಿಲ್ಲೆಗಳಲ್ಲಿ ನಾವು ಜಂಟಿ ಪ್ರವಾಸ ಮಾಡಿದ್ದೇವೆ. ಫೆಬ್ರವರಿಯಿಂದ ಬೀದರ್ ಜಿಲ್ಲೆಯಿಂದ ನಾನು ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡುತ್ತೇನೆ. ಡಿ.ಕೆ.ಶಿವಕುಮಾರ್ ಅವರು ದಕ್ಷಿಣ ಕರ್ನಾಟಕ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಾರೆ. ಬಳಿಕ ನಾವು ಭೌಗೋಳಿಕವಾಗಿ ಜಿಲ್ಲೆಗಳನ್ನು ಬದಲಾವಣೆ ಮಾಡಿಕೊಳ್ಳುತ್ತೇವೆ ಎಂದರು.
ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿ ಅಪ್ರಸ್ತುತ, ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಾನು ಜೆಡಿಎಸ್ ವಿಷಯದಲ್ಲಿ ಮೃಧುವಾಗಿಲ್ಲ ಎಂದು ಸ್ಪಷ್ಟಪಡಿಸಿದರು.