ಮಂಡ್ಯ: ಪ್ರತಿ ಟನ್ ಕಬ್ಬಿಗೆ 4500 ರೂ. ಹಾಗೂ ಪ್ರತಿ ಲೀರ್ ಹಾಲಿಗೆ 40 ರೂ ನಿಗದಿಪಡಿಸುವಂತೆ ಆಗ್ರಹಿಸಿ ಕಳೆದ ಫೆ.15ರಿಂದ ರೈತಸಂಘದ ಕಾರ‍್ಯಕರ್ತರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಸೋಮವಾರ ಅಂತ್ಯಗೊಂಡಿದೆ.
ಕಬ್ಬು ಮತ್ತು ಹಾಲಿನ ದರ ನಿಗದಿಗೆ ಒತ್ತಾಯಿಸಿ ರೈತಸಂಘದ ಕಾರ‍್ಯಕರ್ತರು ನ.೭ರಿಂದ ಅಹೋರಾತ್ರಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಹೋರಾಟವು ಫೆ.14ರಂದು ಶತದಿನ ಪೂರೈಸಿದರೂ ಸರಕಾರ ತಮ್ಮ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಫೆ.15ರಿಂದ ಐದು ಮಂದಿ ಕಾರ‍್ಯಕರ್ತರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ಇವರಲ್ಲಿ ಇಬ್ಬರು ಶನಿವಾರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಸ್ವಲ್ಪ ಗುಣಮುಖರಾದ ಬಳಿಕ ಮತ್ತೆ ಧರಣಿ ಸ್ಥಳಕ್ಕೆ ಆಗಮಿಸಿ, ಸತ್ಯಾಗ್ರಹ ಮುಂದುವರೆಸಿದ್ದರು. ಆದರೆ, ಉಪವಾಸ ನಿರತ ಮಲ್ಲನಾಯಕನಕಟ್ಟೆ ವಿಜಯಕುಮಾರ್, ಭೂತನಹೊಸೂರು ಸಂತೋಷ್, ವಿನೋದ್‌ಬಾಬು, ಜಿ.ಮಲ್ಲಿಗೆರೆ ಅಣ್ಣಯ್ಯ, ಗೂಳೂರು ರಾಮಕೃಷ್ಣ ಅವರ ಆರೋಗ್ಯದಲ್ಲಿ ಸೋಮವಾರ ಸ್ವಲ್ಪ ಏರುಪೇರಾಗಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಡಿಎಚ್‌ಒ ಡಾ.ಟಿ.ಎನ್.ಧನಂಜಯ, ತಹಸಿಲ್ದಾರ್ ಕುಂ.ಞ. ಅಹಮ್ಮದ್ ಅವರು ಸೋಮವಾರ ಸಂಜೆ ಧರಣಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಆರೋಗ್ಯದಲ್ಲಿ ಏರುಪೇರಾಗಿದೆ. ಅವರ ದೇಹದಲ್ಲಿ ಪೊಟ್ಯಾಷಿಯಂ, ಸೋಡಿಯಂ ಪ್ರಮಾಣ ಕಡಿಮೆಯಾಗಿದೆ. ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ? ಅವರ ಆರೋಗ್ಯದ ದೃಷ್ಟಿಯಿಂದ ದಯವಿಟ್ಟು ಉಪವಾಸ ಕೈಬಿಡಿ. ಮುಖ್ಯಮಂತ್ರಿಯವರು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದಾರೆ. ನೀವು ಹೋರಾಟ ಮುಂದುವರೆಸಲು ಯಾವುದೇ ಅಡ್ಡಿಯಿಲ್ಲ ಎಂದು ಮನವಿ ಮಾಡಿದರು.
ಸುದೀರ್ಘ ಮಾತುಕತೆ ಬಳಿಕ ಪ್ರತಿಭಟನಾಕಾರರ ಮನವೊಲಿಸಿ, ಅವರಿಗೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅವರು ಸ್ವತಃ ತಂಪು ಪಾನೀಯ ಕುಡಿಸಿದರು. ಇದರೊಂದಿಗೆ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿತು. ಈ ಸಂದರ್ಭದಲ್ಲಿ ರೈತಸಂಘದ ರಾಜ್ಯ ಸಂಘಟನಾ ಕಾರ‍್ಯದರ್ಶಿ ಎಸ್.ಸಿ.ಮಧುಚಂದನ್, ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ‍್ಯದರ್ಶಿ ಪ್ರಸನ್ನ ಎನ್.ಗೌಡ ಇತರರು ಹಾಜರಿದ್ದರು.
ಇಂದು ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರೈತನಾಯಕ ದರ್ಶನ್ ಪುಟ್ಟಣ್ಣಯ್ಯ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಸಮಾಲೋಚಿಸಿದ್ದಾರೆ. ಫೆ.24ರೊಳಗೆ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯವರ ಭರವಸೆಗೆ ಉಪವಾಸ ಸತ್ಯಾಗ್ರಹವನ್ನು ಕೈ ಬಿಡಲಾಗಿದೆ. ಆದರೆ, ಅಹೋರಾತ್ರಿ ಧರಣಿ ಮುಂದುವರೆಯಲಿದೆ.
-ಎಸ್.ಸಿ.ಮಧುಚಂದನ್, ರಾಜ್ಯ ಸಂಘಟನಾ ಕಾರ‍್ಯದರ್ಶಿ, ರೈತಸಂಘ, ಮಂಡ್ಯ