Mysore
25
overcast clouds
Light
Dark

ಶೈಕ್ಷಣಿಕ ವಲಯದಲ್ಲಿ ನಾನು ಶಾಸಕನಾಗಿರುವುದೇ ಹೆಮ್ಮೆ : ಶಾಸಕ ಆರ್.ನರೇಂದ್ರ

ಹನೂರು: ಜಿಲ್ಲೆಯಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ಹೊರತರುತ್ತಿರುವ ಶಿಕ್ಷಕರಿರುವ ಶೈಕ್ಷಣಿಕ ವಲಯದಲ್ಲಿ ನಾನು ಶಾಸಕನಾಗಿರುವುದೇ ಹೆಮ್ಮೆಯ ವಿಚಾರ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.

ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹನೂರು ವಿಧಾನಸಭಾ ಕ್ಷೇತ್ರ ಭೌಗೋಳಿಕವಾಗಿ ಬಹು ವಿಸ್ತಿರ್ಣವನ್ನು ಹೊಂದಿರುವುದರ ಜೊತೆಗೆ ಬಹುತೇಕ ಹಾಡಿ ಹಳ್ಳಿಗಳಿಂದ ಕೂಡಿದೆ. ಇಂತಹ ವೈವಿಧ್ಯಮಯ ಪರಿಸರದಲ್ಲಿ ಶಿಕ್ಷಣವನ್ನು ಒದಗಿಸುವುದು ಸುಲಭವಲ್ಲ. ಅನೇಕ ಅಡತಡೆಗಳು ಇದ್ದರೂ ಕೂಡ ನಮ್ಮ ಶಿಕ್ಷಕರು ಸತತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಕಾಪಾಡುತ್ತಾ ಬಂದಿದ್ದಾರೆ. ಕೊರೊನಾ ವೇಳೆಯಲ್ಲಿಯೂ ಕೂಡ ಹಳ್ಳಿ ಹಳ್ಳಿಗಳ ಜಗಲಿಕಟ್ಟೆ, ಅರಳಿಮರ ಇನ್ನಿತರಡೆ ಪಾಠ ಪ್ರವಚನ ನೀಡಿದ್ದಾರೆ. ಆನ್‌ಲೈನ್ ಶಿಕ್ಷಣವನ್ನು ನೀಡಿದ್ದಾರೆ. ತಾಲೂಕಿನಲ್ಲಿ ಪ್ರಾಥಮಿಕ ಹಂತದ ಶಾಲೆಗಳಿಂದ ಪದವಿ ಶಿಕ್ಷಣದವರೆಗೆ ಉತ್ತಮ ಸಾಧನೆ ಇದೆ. ರಾಜ್ಯದಲ್ಲಿಯೇ ನಮ್ಮ ಪದವಿ ಕಾಲೇಜು ಶೈಕ್ಷಣಿಕವಾಗಿ ೫ನೇ ಸ್ಥಾನವನ್ನು ಪಡೆದಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು ಮರಳಿನ ಮೂಲಕ ಬೆರಳುಗಳಲ್ಲಿ ಕಲಿಸುತ್ತಿದ್ದ ಕಾಲದಿಂದ ಇಂದು ಕಂಪ್ಯೂಟರ್ ಶಿಕ್ಷಣಕ್ಕೆ ಬಂದಿದ್ದೇವೆ. ನಾಗಲೋಟದಲ್ಲಿ ಸಾಗುತ್ತಿರುವ ಆಧುನಿಕ ಜೀವನದಲ್ಲಿ ಶಿಕ್ಷಕರು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಕಂಪ್ಯೂಟರ್ ಶಿಕ್ಷಣದಲ್ಲೂ ಜ್ಞಾನವನ್ನು ಹೊಂದಬೇಕಾಗಿದೆ. ವಿವಿಧ ಪರಿಸರದಿಂದ ಶಾಲೆಗೆ ಆಗಮಿಸುವ ಮಗುವಿನಲ್ಲಿರುವ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುವುದು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಜೊತೆಗೆ ಜೀವನಕ್ಕೆ ಬೇಕಾದ ಮೌಲ್ಯಯುತ ಗುಣಗಳನ್ನು ಬೆಳೆಸುವ ಬಹುದೊಡ್ಡ ಜವಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.

ಮೈಸೂರು ಡಯಟ್ ಪ್ರಾಂಶುಪಾಲರಾದ ಪಾಂಡು ರವರು ಮಾತನಾಡಿ ವಿದ್ಯಾರ್ಥಿಗಳು ಹೆಚ್ಚಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರಿಂದ ಪ್ರಭಾವಿತರಾಗುತ್ತಾರೆ. ಅವರ ನಡವಳಿಕೆಗನ್ನು ಗಮನಿಸುತ್ತಿರುತ್ತಾರೆ. ಆಗಾಗಿ ಈ ಹಂತದಲ್ಲಿ ಕಲಿಕೆ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಿ. ಡಾ.ಬಿ.ಆರ್.ಅಂಬೇಡ್ಕರ್ ಅವರು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದರು. ಸಂಪಾದಿಸಿದ ಹಣದ ಒಂದು ಭಾಗವನ್ನು ಪುಸ್ತಕ ಮತ್ತು ಶಿಕ್ಷಣಕ್ಕೆ ನೀಡಿ ಎಂದಿದ್ದರು. ಶಿಕ್ಷಕರು ಇನ್ನೂ ಕಲಿಯುತ್ತಲೇ ಇರುತ್ತಾರೆ ಆಗಾಗಿ ಜ್ಞಾನಾರ್ಜನೆ ಕಡೆ ಗಮನಹರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಶಿಕ್ಷಕ ಶಿಕ್ಷಕಿಯರಿಗೆ ಬಹುಮಾನವನ್ನು ವಿತರಿಸಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕ್ಕಿನಲ್ಲೇ ಉತ್ತಮ ಅಂಕಗಳನ್ನು ಗಳಿಸಿದ ಗೌತಮ ಶಿಕ್ಷಣ ಸಂಸ್ಥೆಯ ಪರವಾಗಿ ಮುಖ್ಯ ಶಿಕ್ಷಕ ಲಿಂಗರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಗಿರೀಶ್, ಸದಸ್ಯರುಗಳಾದ ಸಂಪತ್‌ಕುಮಾರ್, ಮಹೇಶ್ ನಾಯಕ, ಮುಮತಾಜ್ ಬಾನು, ಪವಿತ್ರ, ತಾಲ್ಲೂಕು ಪಂಚಾಯಿತಿ ಇಓ ಶ್ರೀನಿವಾಸ್, ಬಿಇಓ ಶಿವರಾಜು, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಮಹಾದೇವ, ಸರ್ಕಾರಿ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರಾದ ಹ.ಮ.ಗುರುಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಮುನಿಯ ನಾಯಕ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಮಲ್ ದಾಸ್, ಸಹಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ಪದವೀಧರ ಶಿಕ್ಷಕರ ಸಂಘದ ಅದ್ಯಕ್ಷ ಮಾದೇಶ್, ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅದ್ಯಕ್ಷ ಕೆಂಪರಾಜು, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸೆಂದಿಲ್ ಕುಮಾರ್, ತಾಲೂಕು ದೈಹಿಕ ಪರಿವೀಕ್ಷಕ ಮಾದೇವ್ ಹಾಗೂ ಸಹ ಶಿಕ್ಷಕರು ಹಾಜರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ