ಮೈಸೂರು: ದಸರಾ ಕ್ರೀಡಾಕೂಟದಲ್ಲಿ ಅವ್ಯವಸ್ಥೆ ಯಾಗಿರುವ ಬಗ್ಗೆ ದೂರುಗಳು ಬಂದಿದ್ದು, ಈ ಕುರಿತು ಕೂಡಲೇ ವರದಿ ಸಲ್ಲಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಇಲ್ಲದೇ ಇರುವುದು. ದಸರಾ ಕ್ರೀಡಾಕೂಟದಲ್ಲಿ ಭಾಗಿಯಾದವರಿಗೆ ನಿಗದಿಗಿಂತ ಕಡಿಮೆ ಗೌರವಧನ ನೀಡಲಾಗಿರುತ್ತದೆ. ಅಲ್ಲದೆ, ಕರಾಟೆ, ಬಾಡಿಬಿಲ್ಡಿಂಗ್, ಚೆಸ್, ಅಂಧರ ಚೆಸ್ ಮತ್ತು ಸೈಕಲ್ ಪೋಲೋ ಸ್ಪರ್ಧೆಗಳಿಗೆ ನಗದು ಬಹುಮಾನ ನೀಡಿರುವುದಿಲ್ಲ. ಕ್ರೀಡಾಕೂಟಕ್ಕೆ ಸೂಕ್ತ ರೀತಿಯಲ್ಲಿ ಮೈದಾನಗಳನ್ನು ಸಿದ್ಧವಾಗಿಲ್ಲದೇ ಇರುವುದು. ಕ್ರೀಡಾಕೂಟವನ್ನು ಮೊಟಕುಗೊಳಿಸಲಾಗಿರುವುದು. ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ, ಶೂ ವಿತರಿಸಿರುವುದಿಲ್ಲ. ಮ್ಯಾರಥಾನ್ ಕ್ರೀಡೆ ರದ್ದುಗೊಳಿಸಲಾಗಿದೆ. ಬೇರೊಂದು ಸಮಿತಿ ಆಯೋಜಿಸಿರುವ ಯೋಗ ಸ್ಪರ್ಧೆಯನ್ನು ಮತ್ತೊಮ್ಮೆ ಆಯೋಜಿಸಲಾಗಿರುವುದು. ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೆ ಗೌರವಧನ ನೀಡದೇ ಇರುವುದು. ಕಬ್ಬಡಿ ಕ್ರೀಡೆಯಲ್ಲಿ ಅವ್ಯವಸ್ಥೆ. ಈ ರೀತಿಯಾಗಿ ಅವ್ಯವಸ್ಥೆ ಕುರಿತು ಪಟ್ಟಿ ಮಾಡಿರುವ ಅಪರ ಮುಖ್ಯ ಕಾರ್ಯದರ್ಶಿ ಅವರು, ಇದರಿಂದಾಗಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಅನಾನೂಕೂಲವಾಗಿರುತ್ತದೆ ಮತ್ತು ಇಲಾಖೆಯ ಗೌರವಕ್ಕೆ ಧಕ್ಕೆ ಉಂಟಾಗಿರುತ್ತದೆ. ಆದ್ದರಿಂದ ಈ ಮೇಲಿನ ಅಂಶಗಳ ಬಗ್ಗೆ ನಿಮ್ಮ ವರದಿಯನ್ನು ಕೂಡಲೇ ಸಲ್ಲಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ನೋಟಿಸ್‌ನ ಪ್ರತಿಯನ್ನು ಜಂಟಿ ನಿರ್ದೇಶಕರಿಗೂ ನೀಡಲಾಗಿದೆ.
ದಸರಾ ಕ್ರೀಡಾಕೂಟ ಆಯೋಜಿಸಲು ಸರ್ಕಾರದ ವತಿಯಿಂದ ೫ ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿತ್ತು. ಕ್ರೀಡಾಕೂಟದ ಅವ್ಯವಸ್ಥೆ ಬಗ್ಗೆ ಪತ್ರಿಕೆಯಲ್ಲಿ ಬಂದಿರುವ ವರದಿಯನ್ನು ಗಮನಿಸಿ ನೋಟಿಸ್ ನೀಡಲಾಗಿದೆ.
– ಡಾ.ಶಾಲಿನಿ ರಜನೀಶ್