ಮೈಸೂರು: ಮೈಸೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ಕೆ.ವಿ.ರಾಜೇಂದ್ರ ಗುರುವಾರ ಅಧಿಕಾರ ಸ್ವೀಕರಿಸಿದರು.
ಡಾ.ಬಗಾದಿ ಗೌತಮ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾಗಿದ್ದ ರಾಜೇಂದ್ರ ಅವರನ್ನು ವರ್ಗಾವಣೆ ಮಾಡಿತ್ತು. ಗುರುವಾರ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರಾಜೇಂದ್ರ ಅವರನ್ನು ನಿರ್ಗಮಿತ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸ್ವಾಗತಿಸಿದರು. ಬಳಿಕ ಹೂಗುಚ್ಛ ನೀಡಿ ಅಧಿಕಾರವನ್ನು ಹಸ್ತಾಂತರಿಸಿದರು. ಸರ್ಕಾರದ ನಿಯಮಾನುಸಾರ ಕಡತಗಳಿಗೆ ಸಹಿಹಾಕುವ ಮೂಲಕ ವಿದ್ಯುಕ್ತವಾಗಿ ಅಧಿಕಾರ ವಹಿಸಿಕೊಂಡರು.
ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ವಿ.ರಾಜೇಂದ್ರ, ಸರ್ಕಾರ ನನ್ನ ಸಾಮರ್ಥ್ಯ ನೋಡಿ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಜಿಲ್ಲಾಧಿಕಾರಿ ಕಚೇರಿ ಎಂದರೆ ಸಾರ್ವಜನಿಕರಿಗೆ ಸದಾ ತೆರೆದಿರಬೇಕು. ಅಂತಹ ಆಡಳಿತ ನೀಡಲು ಇಷ್ಟಪಡುತ್ತೇನೆ. ಸರ್ಕಾರದ ಯೋಜನೆಗಳಿಗೆ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ಅಲೆಯದೆ ತಾಲ್ಲೂಕು ಮಟ್ಟದಲ್ಲೇ ಸಮಸ್ಯೆ ಬಗೆಹರಿಸುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದರು. ಮೈಸೂರಿನ ಬಗ್ಗೆ ಮೊದಲಿನಿಂದಲೂ ತಿಳಿದಿದ್ದೇನೆ. ಕೇಳಿದ್ದೇನೆ. ಹಲವಾರು ಹಿರಿಯ ಅಧಿಕಾರಿಗಳು ಮೈಸೂರಿನಲ್ಲಿ ಕಾರ್ಯ ನಿರ್ವಹಿಸಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿರುವ ಕಾರಣ ತಮ್ಮ ಅವಧಿಯಲ್ಲೂ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ ಎಂದರು. ನಗರಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ, ಮುಡಾ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಹಾಜರಿದ್ದರು.
ಮೈಸೂರಿನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಹೆಚ್ಚು ಸವಾಲುಗಳಿವೆ. ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತೇನೆ. ಇದಕ್ಕೆ ನನ್ನದೇ ಆದ ಯೋಜನೆ ಸಿದ್ಧಪಡಿಸಿಕೊಂಡಿದ್ದು, ಅದರ ಅನುಷ್ಠಾನಕ್ಕೆ ಪ್ರಾಮಾಣಿಕವಾದ ಪ್ರಯತ್ನ ಮಾಡುವೆ. ಜಿಲ್ಲೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಒಟ್ಟಿಗೆ ಕರೆದುಕೊಂಡು ಕೆಲಸ ಮಾಡುವೆ. -ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ
ಉತ್ತಮವಾಗಿ ಕೆಲಸ ಮಾಡಿದ ತೃಪ್ತಿಯಿದೆ
ಮೈಸೂರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ಒಂದೂವರೆ ವರ್ಷ ಜಿಲ್ಲೆಯ ಜನತೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಸಂಸದರು, ಶಾಸಕರು, ಅಧಿಕಾರಿಗಳು ಸಹಕಾರ ಕೊಟ್ಟಿದ್ದಾರೆ. ಎಲ್ಲ ಸಮಯದಲ್ಲಿ ಜತೆಯಾಗಿದ್ದಾರೆ. ನೂತನ ಜಿಲ್ಲಾಧಿಕಾರಿಗೂ ಎಂದಿನಂತೆಯೇ ಸಹಕಾರ ನೀಡಬೇಕು ನಿರ್ಗಮಿತ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು.
ನೂತನ ಜಿಲ್ಲಾಧಿಕಾರಿಗೆ ಅಧಿಕಾರಿ ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮೈಸೂರಿನಲ್ಲಿ ಕೆಲಸದ ಒತ್ತಡ ಹೆಚ್ಚು. ಮೈಸೂರು ಈಗ ಟೇಕ್ ಆಫ್ ಹಂತದಲ್ಲಿದ್ದು, ಕೈಗಾರಿಕೆಗಳು ಹೆಚ್ಚಾಗಿ ಬರುತ್ತವೆ. ಕೈಗಾರಿಕೆುಂಂತೆಯೇ ಕೃಷಿಗೂ ಹೆಚ್ಚಿನ ಆದ್ಯತೆ ಇದೆ. ರಾಷ್ಟ್ರಪತಿ, ಪ್ರಧಾನಿ ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನಗೆ ಸಿಕ್ಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಕೋವಿಡ್ ನಿಯಂತ್ರಣ, ದಿನನಿತ್ಯದ ಕೆಲಸಗಳು ಕೂಡ ತೃಪ್ತಿ ತಂದಿವೆ. ಒಂದೂವರೆ ವರ್ಷದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ ಎಂದರು. ಕೋವಿಡ್ ನಿಯಂತ್ರಣಕ್ಕೆ ತರಲು ಜನರ ಸಹಕಾರ ಎಂದಿಗೂ ಮರೆಯಲ್ಲ. ಸರಳ ದಸರಾ ಮತ್ತು ಅದ್ಧೂರಿ ದಸರಾ ಮಹೋತ್ಸವ ಆಚರಣೆ ಮಾಡಿದ್ದೇವೆ. ದಕ್ಷಿಣ ಪದವೀಧರ, ಮೈಸೂರು-ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಯಶಸ್ವಿಯಾಗಿ ಮಾಡಿದ್ದೆವು ಎಂದರು.
ನಂಜನಗೂಡು: ಇಲ್ಲಿನ ಶ್ರೀ ಕಂಠೇಶ್ವರ ದೇವಾಲಯಕ್ಕೆ ಮೈಸೂರು ನೂತನ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕುಟುಂಬ ಸಮೇತ ದೇವಾಲಯಕ್ಕೆ ಭೇಟಿ ನೀಡಿ ನಂಜುಂಡೇಶ್ವರ ದರ್ಶನ ಪಡೆದರು. ದೇವಾಲಯ ಆಡಳಿತ ಮಂಡಳಿ ವತಿಯಿಂದ ಅವರನ್ನು ಸ್ವಾಗತಿಸಲಾಯಿತು.
ದೇವಾಲಯಕ್ಕೆ ಭೇಟಿ ನೀಡಿ ತುಂಬಾ ಖುಷಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ ಮೈಸೂರು ಜಿಲ್ಲೆಯಲ್ಲಿ ಎಲ್ಲಾ ಅಧಿಕಾರಿ ವರ್ಗದವರನ್ನು ಮತ್ತು ಎಲ್ಲಾ ನಾಯಕರನ್ನು ಒಟ್ಟುಗೂಡಿಸಿಕೊಂಡು ಕೆಲಸ ಮಾಡುತ್ತೇನೆ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಶಿವಮೂರ್ತಿ ಆರ್ ಐ ಪ್ರಕಾಶ್ ಸೇರಿದಂತೆ ಅಧಿಕಾರಿಗಳು ಇದ್ದರು.