ಮೈಸೂರು: ಕಾಯಕ ಮತ್ತು ದಾಸೋಹದ ತತ್ವ, ಸಜ್ಜನಿಕೆ, ಸರಳತೆ, ಅರಿವಿನ ನಾಡಿನ ಪ್ರಖ್ಯಾತ ಧರ್ಮಗುರು, ಮಹಾಚೇತನ ಗುರುಮಲ್ಲೇಶ್ವರರು ಎಂದು ವಿದ್ವಾಂಸ ಡಾ.ಗೊ.ರು.ಚನ್ನಬಸಪ್ಪ ಹೇಳಿದರು.
ನಗರದ ಅಗ್ರಹಾರದ ಜೆಎಸ್‌ಎಸ್ ಶ್ರೀ ರಾಜೇಂದ್ರ ಭವನದಲ್ಲಿ ದೊಡ್ಡಗಟ್ಟಿ ಪ್ರಕಾಶನ ಸಂಸ್ಥೆಯು ಹೊರ ತಂದಿರುವ ‘ಮಹಾ ದಾಸೋಹಿ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ನೂರಾರು ವರ್ಷಗಳಿಂದ ಹಸಿದವರಿಗೆ ದೇವನೂರು ಗುರುಮಲ್ಲೇಶ್ವರ ಮಠ ದಾಸೋಹ ನಡೆಸುತ್ತ ಬಂದಿದೆ. ಇಂತಹ ಅನ್ನದಾಸೋಹ ಪರಂಪರೆಯನ್ನುಗುರು ಮಲ್ಲೇಶ್ವರರು ಹುಟ್ಟು ಹಾಕಿ. ಹಸಿದು ಬಂದವರಿಗೆ ದಾಸೋಹ ನೀಡಲು ಜೋಳಿಗೆ ಹಿಡಿದು ಮನೆ ಮನೆಗೆ ಹೋಗಿ ಅನ್ನ ಭಿಕ್ಷೆ ಪಡೆದು ಬರುತ್ತಿದ್ದರು ಎಂದರು.
ಆ ಪರಂಪರೆ ಇಂದಿಗೂ ಮುಂದುವರಿದೆ. ಲೇಖಕರು ಪುಸ್ತಕವನ್ನು ಕಳುಹಿಸುವ ಜೊತೆಗೆ ಕಾರ್ಯಕ್ರಮಕ್ಕೆ ಪತ್ರ ಕೂಡ ಹಾಕಿದ್ದರು. ದೊಡ್ಡ ವ್ಯಕ್ತಿತ್ವ ಕುರಿತು ಪುಸ್ತಕ ಬರೆದಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಾರದೆ ಇರಲು ಸಾಧ್ಯವಿಲ್ಲ. ಹಾಗಾಗಿ ಬಂದಿರುವೆ ಎಂದರು.
ಲೇಖಕರು ಕೃತಿಯಲ್ಲಿ ಶರಣ ಸಾಹಿತ್ಯದ ಸಂದೇಶಗಳನ್ನು ಅಳವಡಿಸಿದ್ದಾರೆ. ಕಾದಂಬರಿ ಪ್ರಕಾರವನ್ನು ಬಳಸಿದ್ದಾರೆ. ಈ ಕೃತಿಗಾಗಿ ೫೦ ಆಕಾರ ಗ್ರಂಥಗಳನ್ನು ಅಧ್ಯಯನ ಮಾಡಿದ್ದು, ಗುರುಮಲ್ಲೇಶ್ವರರು ಪವಾಡ ಪುರುಷರೆಂದು ಕೃತಿಯಲ್ಲಿ ದಾಖಲಿಸಲಾಗಿದೆ. ಪವಾಡವೆಂದರೆ ಮಂತ್ರದಿಂದ ಮಾಡುವುದಲ್ಲ. ಒರಟನಾದವನನ್ನು ಸಾತ್ವಿಕವಾಗಿ ಮಾಡುವುದೇ ಪವಾಡ. ಒಂದು ಕಾಲಮಾನದ ನೈಜ ಅಂಶಗಳನ್ನು ದಾಖಲು ಮಾಡಿದ್ದಾರೆ ಎಂದು ಹೇಳಿದರು.
ಗುರುಮಲ್ಲೇಶ್ವರರು ವಿರಾಟ ಚೇತನ ಅವರು ದಾಖಲಿಸಲಿರುವ ಪುಸ್ತಕ ಇದು. ಗುರುಮಲ್ಲೇಶ್ವರರು ಶ್ರೇಷ್ಠ ಲೋಕ ಪ್ರಜ್ಞಾ ಜೀವಿ. ಅವರ ಬಗ್ಗೆ ಇಂದಿನ ತಲೆಮಾರಿಗೆ ತಿಳಿಸಲು ೭೦೦ ಪುಟಗಳ ಬೃಹತ್ ಗ್ರಂಥವನ್ನು ಲೇಖಕರು ರಚಿಸಿದ್ದಾರೆ ಎಂದು ಬಣ್ಣಿಸಿದರು.
ಗುಂಡ್ಲುಪೇಟೆ ತಾಲ್ಲೂಕಿನ ಸೋಮಳ್ಳಿಯ ಶ್ರೀ ವೀರಸಿಂಹಾಸನ ಶಿಲಾಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ, ಶ್ರೀ ನಟರಾಜ ಶಿಕ್ಷಣ ಸಂಸ್ಥೆಯ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಮಲೆಯೂರು ಗುರುಸ್ವಾಮಿ, ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದಪ್ಪ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಚಂದ್ರಶೇಖರ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಶೂನ್ಯದ ಭಾಷೆ:
೪೫೦ ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಏಕನಾಥ, ನಿವೃತಿ ನಾಥ ಮತ್ತು ಮುಕ್ತಬಾಯಿ ಎಂಬ ಮೂರು ಜನ ಸಂತರಿದ್ದರು. ಏಕನಾಥರು ಪತ್ರವೊಂದನ್ನು ಬರೆದು, ತಮ್ಮ ಶಿಷ್ಯನ ಕೈಯಲ್ಲಿ ಕೊಟ್ಟು ನಿವೃತ್ತಿ ನಾಥನಿಗೆ ತಲುಪಿಸಲು ಹೇಳಿದರು. ನಿವೃತಿನಾಥರು ಪತ್ರವನ್ನು ಓದಿ ಕಣ್ಣಿಗೆ ಒತ್ತಿಕೊಂಡು ಆ ಶಿಷ್ಯನ ಕೈಯಲ್ಲಿಯೇ ಮುಕ್ತಬಾಯಿ ಅವರಿಗೆ ತಲುಪಿಸಿದರು. ಮುಕ್ತಬಾಯಿ ಅವರು ಪತ್ರವನ್ನು ನೋಡಿ, ಮತ್ತೆ ಏಕನಾಥನಿಗೆ ತಲುಪಿಸುವಂತೆ ಶಿಷ್ಯನಿಗೆ ಕೊಟ್ಟರು. ಈ ವೇಳೆ ಶಿಷ್ಯನು ತನ್ನ ಕುತೂಹಲ ತಡೆಯಲಾರದೆ ಪತ್ರವನ್ನು ತೆರೆದು ನೋಡಿಯೇ ಬಿಟ್ಟನು. ಆ ಪತ್ರವೂ ಖಾಳೆ ಅಳೆಯಾಗಿತ್ತು. ಮತ್ತೆ ಅದನ್ನು ಏಕನಾಥನ ಕೈಗೆ ಕೊಟ್ಟು ಗುರುಗಳೇ ಇದರಲ್ಲಿ ಏನು ಇಲ್ಲ… ಇದರ ಅರ್ಥ ಏನೆಂದು ಕೇಳುತ್ತಾನೆ.
ಆಗ ಏಕನಾಥರು, ‘ಬದುಕಿಗೆ ಬೇಕಾದ ಎಲ್ಲವೂ ಖಾಲಿ ಅಳೆಯಲ್ಲಿಯೇ ಇದೆ. ಆದರೆ, ಇಲ್ಲಿರುವ ಭಾಷೆ ಶೂನ್ಯ ಭಾಷೆಯಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಬೇಕಿರುವುದು ಅಂತರಂಗ. ಆಗ ಶೂನ್ಯ ಭಾಷೆ ಕಲಿಯಲು ಏನು ಬೇಕೆಂದು ಪ್ರಶ್ನೆ ಕೇಳುತ್ತಾನೆ ಆಗ ಜ್ಞಾನ ಮತ್ತು ಮೌನದ ಮೂಲಕ ಶೂನ್ಯ ಭಾಷೆಯನ್ನು ಅರ್ಥ ಮಾಡಿಕೊಳ್ಳಬಹುದು’ ಸಂದೇಶವನ್ನು ಕಥೆಯ ಮೂಲಕ ಡಾ.ಗೊ.ರು.ಚನ್ನಬಸಪ್ಪ ಬಿಡಿಸಿ ಹೇಳಿದರು.