ಮೈಸೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಹೊರತರಲಾಗಿರುವ ಹೊಸ ವರ್ಷದ ಡೈರಿಯನ್ನು ಪ್ರಾದೇಶಿಕ ನಿರ್ದೇಶಕ ಬಿ. ಜಯರಾಂ ನೆಲ್ಲಿತ್ತಾಯ ಬಿಡುಗಡೆಗೊಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಡೈರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 11ನೇ ವರ್ಷಕ್ಕೆ ಕಾಲಿಟ್ಟಿದೆ. ಸುಮಾರು ಐದು ಸಾವಿರ ಕಾರ್ಯಕರ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 9 ಲಕ್ಷ ಫಲಾನುಭವಿಗಳಿದ್ದಾರೆ. ಅಲ್ಲದೆ, 1.15 ಲಕ್ಷ ಸದಸ್ಯರಿದ್ದಾರೆ. ಇವರಿಗಾಗಿ ಆರೋಗ್ಯಕ್ಕೆ ಸಂಬಂಧಿಸಿದ ಎರಡು ಕಾರ್ಯಕ್ರಮಗಳಿದ್ದು, ಗುರುತಿನ ಚೀಟಿ ಪಡೆದವರಿಗೆ ಟ್ರಸ್ಟ್ ಗುರುತಿಸಿದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ. ಜೊತೆಗೆ ನಿರ್ಗತಿಕರಿಗೆ 500 ರಿಂದ ಎರಡು ಸಾವಿರ ರೂ.ಗಳ ವರೆಗೆ ಮಾಸಾಶನ, ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಇದಲ್ಲದೆ ದೇವಸ್ಥಾನ, ಕೆಎಂಎಫ್ ಕಟ್ಟಡಗಳಿಗೆ ನೆರವು ಸೇರಿದಂತೆ ಸಮಗ್ರ ಅಭಿವೃದ್ಧಿಯ ಕೆಲಸ ಕೈಗೊಳ್ಳಲಾಗುತ್ತಿದೆ. ಇದರೊಡನೆ ಅನಾಥ ಮಹಿಳೆಯರಿಗೆ ಒಂದು ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿದೆ. ಸಂಸ್ಥೆ ನಡೆಸುತ್ತಿರುವ ಮದ್ಯವ್ಯರ್ಜನ ಶಿಬಿರಗಳಿಂದಾಗಿ ನೂರಾರು ಮಂದಿ ಮದ್ಯ ತ್ಯಜಿಸಿದ್ದಾರೆಂದು ಮಾಹಿತಿ ನೀಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಮೈಸೂರು ತಾಲ್ಲೂಕು ಯೋಜನಾಧಿಕಾರಿ ನಂದಿನಿ, ಆಡಳಿತ ಯೋಜನಾಧಿಕಾರಿ ಪ್ರಸಾದ್, ಜಿಲ್ಲಾ ಕಚೇರಿಯ ಯೋಜನಾಧಿಕಾರಿ ಮಾಧವ್, ಜಿಲ್ಲಾ ನಿರ್ದೇಶಕರಾದ ಎಂ. ಲಕ್ಷ್ಮಣ್, ಮೇಲ್ವಿಚಾರಕರಾದ ಕುಸುಮಾ, ಶಶಿಕಲಾ ಹಾಜರಿದ್ದರು.





