ಮೈಸೂರು: ಸಾಮಾನ್ಯವಾಗಿ ಯಾವುದೇ ಹಬ್ಬ ಆಚರಣೆ ಇದ್ದರೂ, ಸ್ಥಳೀಯರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವುದು ಸಹಜ. ಪ್ರವಾಸಿಗರೂ ಕೂಡ ಇಂತಹ ಸಂದರ್ಭಗಳನ್ನು ಬಳಸಿಕೊಂಡು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಹಾಗೆಯೇ ಬೆಳಕಿನ ಹಬ್ಬ ದೀಪಾವಳಿ ಆಚರಣೆ ನಿನ್ನೆ (ಸೋಮವಾರ)ಯಿಂದಲೇ ಆರಂಭವಾಗಿದೆ. ಇಂದು, ನಾಳೆ ಕೂಡ ಮುಂದುವರಿಯಲಿದೆ.
ಹಾಗಾಗಿ ಸಾಮಾನ್ಯವಾಗಿ ಮೈಸೂರಿನ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರ ದಂಡು ದಾಳಿ ಇಡುವುದು ಸಾಮಾನ್ಯ ಸಂಗತಿ. ನರಕ ಚತುರ್ದಶಿ (ಅ.೨೪) ಮತ್ತು ಬಲಿಪಾಡ್ಯಮಿ (ಅ.೨೬)ರಂದು ಸರ್ಕಾರಿ ರಜೆ ನೀಡಲಾಗಿದೆ. ನಡುವೆ ಇಂದು (ಮಂಗಳವಾರ) ಒಂದು ದಿನ ಕಾರ್ಯನಿರ್ವಹಣೆ ಇದ್ದರೂ, ಬಹುತೇಕ ಶಾಲಾ ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ ಎನ್ನಲಾಗಿದೆ. ಹಾಗಾಗಿ ಚಾಮುಂಡಿಬೆಟ್ಟಕ್ಕೆ ಪ್ರವಾಸಿಗರು ಮುಗಿಬೀಳುವ ಸಾಧ್ಯತೆ ಇತ್ತು.
ಆದರೆ, ಮಂಗಳವಾರ ಖಂಡಗ್ರಾಸ ಸೂರ್ಯಗ್ರಹಣ ನಡೆಯಲಿದ್ದು, ದೊಡ್ಡ ಸಂಖ್ಯೆಯ ಸಾರ್ವಜನಿಕರು ಮನೆಯಿಂದ ಹೊರಗೆ ಬರುವುದಕ್ಕೂ ಮನಸ್ಸು ಮಾಡಿದಂತೆ ಇರಲಿಲ್ಲ. ಹಾಗಾಗಿ ಚಾಮುಂಡಿಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆಯೂ ಕ್ಷೀಣವಾಗಿತ್ತು. ಬೆಳ್ಳಂಬೆಳಿಗ್ಗೆ ಸ್ವಲ್ಪ ಜನರು ಇದ್ದರೂ, ಅದು ಗಣನೀಯ ಪ್ರಮಾಣದಲ್ಲಿ ಇರಲಿಲ್ಲ.



