ಮಂಡ್ಯ: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಹುದ್ದೆಗೆ ಇಬ್ಬರು ಅಧಿಕಾರಿಗಳು ನೇಮಕವಾಗಿರುವುದು ಇಬ್ಬರ ನಡುವೆ ಮ್ಯೂಸಿಕ್ ಚೇರ್ ಆಟ ಆರಂಭವಾಗಿದೆ.
ಡಿಡಿಪಿಯು ಹುದ್ದೆಗೆ ಉಮೇಶ್ ಹಾಗೂ ಮಂಜುನಾಥ್ ಪ್ರಸನ್ನ ಎಂಬುವರನ್ನು ಸರ್ಕಾರ ನೇಮಿಸಿ ಎಡವಟ್ಟು ಮಾಡಿದ್ದು, ಈ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರದಿಂದಲೇ ಪರಿಹಾರ ಸಿಗಬೇಕಿದ್ದು, ಅಲ್ಲಿಯವರೆಗೂ ಗೊಂದಲ ಮುಂದುವರೆಯಲಿದೆ.
ಪೈಪೋಟಿ: ಉಮೇಶ್ ಅವರು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಆದರೆ ಸೆ.೫ರಂದು ಇವರನ್ನು ಕೊಪ್ಪಳಕ್ಕೆ ವರ್ಗಾವಣೆ ಮಾಡಲಾಗಿತ್ತು. ತೆರವಾಗಿದ್ದ ಜಾಗಕ್ಕೆ ಬೆಂಗಳೂರಿನ ಪಿಯು ಬೋರ್ಡ್ನ ಡಿಡಿ ಮಂಜುನಾಥ ಪ್ರಸನ್ನ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದರನ್ವಯ ಮಂಡ್ಯಕ್ಕೆ ಬಂದು ಅಧಿಕಾರವನ್ನು ಸ್ವೀಕಾರ ಮಾಡಿದ್ದರು.
ಈ ನಡುವೆ ವರ್ಗಾವಣೆ ವಿರುದ್ಧ ಉಮೇಶ್ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮೆಟ್ಟಿಲೇರಿದ್ದರು. ಎರಡು ವರ್ಷಕ್ಕೆ ಮುನ್ನವೇ ಅಂದರೆ ಅವಧಿ ಪೂರ್ವವೇ ತನ್ನನ್ನು ವರ್ಗಾವಣೆ ಮಾಡಿದ್ದು, ಆದೇಶವನ್ನು ರದ್ದುಪಡಿಸುವಂತೆ ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿರುವ ಮಂಡಳಿ ಮಂಡ್ಯ ಡಿಡಿ ಹುದ್ದೆಯಲ್ಲಿಯೇ ಮುಂದುವರೆಯುವAತೆ ಉಮೇಶ್ ಅವರ ಪರವಾಗಿ ಸೆ.೧೯ರಂದು ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ಅವರು ಕೂಡ ಮತ್ತೆ ವಾಪಸ್ ಬಂದಿದ್ದಾರೆ. ಇಬ್ಬರಿಗೂ ಆದೇಶವಿರುವುದರಿಂದ ಕಚೇರಿಯಲ್ಲಿ ಪ್ರತ್ಯೇಕ ಕುರ್ಚಿಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಮುಂದಿನ ಆದೇಶದ ಬಳಿಕ ಯಾರಿಗೆ ಗೇಟ್‌ಪಾಸ್ ಸಿಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಮ್ಯೂಸಿಕ್ ಚೇರ್ ಆಟ : ಗೇಟ್‌ಪಾಸ್ ಸಿಕ್ಕಿದ್ದಾದರೂ ಯಾರಿಗೆ ?
