Mysore
21
overcast clouds
Light
Dark

ಸರ್ಕಾರದ ಆದೇಶದಂತೆ ವೇತನ ಪರಿಷ್ಕರಣೆಗೆ ಆಗ್ರಹ

ಅಳಗಂಚಿ, ಕುಂತೂರಿನ ಬಣ್ಣಾರಿ ಸಕ್ಕರೆ ಕಾರ್ಖಾನೆ ನೌಕರರ ಪ್ರತಿಭಟನೆ

ಚಾಮರಾಜನಗರ: ಸಕ್ಕರೆ ಉದ್ಯಮಗಳ ೭ನೇ ತ್ರಿಪಕ್ಷೀಯ ವೇತನ ಒಪ್ಪಂದದ ಪ್ರಕಾರ ಸರ್ಕಾರದ ಆದೇಶವನ್ನು ಜಾರಿಗೊಳಿಸಿ ಹಿಂಬಾಕಿ ಪಾವತಿಸಬೇಕು ಎಂದು ಆಗ್ರಹಿಸಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಾರ್ಮಿಕರ ಸಂಘದಿAದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದಿಂದ ಮೆರವಣಿಗೆ ಹೊರಟ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಸಾಗಿ ಜಿಲ್ಲಾಡಳಿತ ಭವನದ ತಲುಪಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಖಾನೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಣ್ಣಾರಿ ಅಮ್ಮನ್ ಸಕ್ಕರೆ ಒಟ್ಟು ೫ ಘಟಕಗಳನ್ನು ಹೊಂದಿದ್ದು ೨ ನಮ್ಮ ರಾಜ್ಯದ ಅಳಗಂಚಿ ಮತ್ತು ಕುಂತೂರುಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿನ ಕಾರ್ಮಿಕರಿಗೆ ಕಳೆದ ೫ ವರ್ಷಗಳಿಂದ ವೇತನ ಪರಿಷ್ಕರಣೆಯಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ವೇತನ ಪರಿಷ್ಕರಣೆಗೆ ಕಂಪನಿಯ ಆಡಳಿತ ವರ್ಗಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದ ತ್ರಿಪಕ್ಷೀಯ ಒಪ್ಪಂದದ ಪ್ರಕಾರ ವೇತನ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ನಂತರ ಈ ಸರ್ಕಾರದ ಆದೇಶದಂತೆ ನಾವು ವೇತನ ಪರಿಷ್ಕರಣೆ ಮಾಡುವುದಿಲ್ಲ. ಕಂಪನಿ ನಿಯಮಗಳ ಪ್ರಕಾರ ಮಾಡುವುದಾಗಿ ಹೇಳಿ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ತ್ರಿಪಕ್ಷೀಯ ಒಪ್ಪಂದವನ್ನು ತಿರಸ್ಕರಿಸಿ ಬಂದರೆ ವೇತನದ ಬಗ್ಗೆ ಮಾತನಾಡುವುದಾಗಿ ಕಂಪನಿ ಹೇಳುತ್ತಿದೆ. ಆದ್ದರಿಂದ ಒಪ್ಪಂದದ ಪ್ರಕಾರ ವೇತನ ನೀಡುವಂತೆ ಕಾರ್ಮಿಕ ಆಯುಕ್ತರ ಮೂಲಕ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಕಂಪನಿಯಲ್ಲಿ ೬ ವರ್ಷಕ್ಕೂ ಹೆಚ್ಚು ಅವಧಿಯ ತರಬೇತಿ ಪೂರೈಸಿ ಖಾಯಂಗೆ ೨೦ಕ್ಕೂ ಹೆಚ್ಚು ಕಾರ್ಮಿಕರು ಕಾಯುತ್ತಿದ್ದಾರೆ. ಹೊರಗುತ್ತಿಗೆ ಕಾರ್ಮಿಕರಿಗೆ ಯಾವುದೇ ಕನಿಷ್ಟ ಸೌಲಭ್ಯಗಳನ್ನು ನೀಡದೆ ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದರೂ ಕಂಪನಿ ಆಡಳಿತ ವರ್ಗವು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಕಂಪನಿಗಳ ಇತರೆ ಘಟಕಗಳಲ್ಲಿ ನೀಡಿರುವಂತೆ ಎಲ್ಲಾ ಕಾರ್ಮಿಕರಿಗೆ ವಸತಿ ಸೌಕರ್ಯ ನೀಡಬೇಕು, ಅಲ್ಲಿಯವರೆಗೂ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮನೆ ಬಾಡಿಗೆ ಭತ್ಯೆ ನೀಡಬೇಕು. ದೂರದಿಂದ ಕಾರ್ಖಾನೆಗೆ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಕಂಪನಿಯಿಂದ
ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಕಾರ್ಖಾನೆಯ ಮುಂದಿನ ಎಲ್ಲಾ ಹಂತದ ನೇಮಕಾತಿಗಳಲ್ಲಿ ಸ್ಥಳೀಯರನ್ನೆ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ