ಮೈಸೂರು: ಕಾಂಗ್ರೆಸ್ಸಿಗರೇ ನಿಜವಾದ ಹಿಂದುಗಳು. ಆರ್‌ಎಸ್‌ಎಸ್, ಬಿಜೆಪಿ ಹಿಂದುತ್ವದ ವಿರೋಧಿಗಳು. ನಮಗೆ ವಸುದೈವ ಕುಟುಂಬಕಂನಲ್ಲಿ ನಂಬಿಕೆ ಇದೆ. ಆದರೆ ಸಂಘ ಪರಿವಾರ, ಬಿಜೆಪಿಯವರಿಗೆ ಮನುವಾದದಲ್ಲಿ ನಂಬಿಕೆ ಇದೆ. ಹಾಗಾಗಿ ಇವರು ಹಿಂದೂಗಳಲ್ಲಿನ ಮನುವಾದಿಗಳು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
ಬುಧವಾರ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತಕ್ಕೆ ಬರುವ ಮುನ್ನ ಮೋದಿಯವರು ನೀಡಿದ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿದ್ದಾರೆ?. ವಿದೇಶದಲ್ಲಿದ್ದ ಕಪ್ಪು ಹಣ ತರಲಿಲ್ಲ. ಪ್ರತಿ ವರ್ಷ ೨ ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಯಿತು. ಕೊಟ್ಟ ಮಾತಿನಂತೆ ನಡೆದುಕೊಳ್ಳದವರನ್ನು ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದರು.
ಕೊಟ್ಟ ಮಾತಿನಂತೆ ನಡೆದುಕೊಳ್ಳದ, ವಾಗ್ದಾನಗಳನ್ನು ಈಡೇರಿಸದ ಬಿಜೆಪಿಯವರು ಶ್ರೀರಾಮನಿಗೆ ದ್ರೋಹ ಬಗೆದವರು. ಪತ್ನಿಯ ರಕ್ಷಣೆಗಾಗಿ ಶ್ರೀರಾಮಚಂದ್ರ ಲಂಕೆಯ ರಾವಣನ ವಿರುದ್ಧ ಯುದ್ಧ ಮಾಡಿದ್ದ. ಪಂಚಭೂತಗಳ ಸಾಕ್ಷಿಯಾಗಿ ವಿವಾಹವಾದ ನರೇಂದ್ರ ಮೋದಿ ತನ್ನ ಪತ್ನಿಗೆ ರಕ್ಷಣೆ ಕೊಡಲಿಲ್ಲ. ಮೋದಿ ಅವರ ರಾಮಾಯಣ ಓದಿದ್ದಾರೋ ಇಲ್ಲವೋ ತಿಳಿದಿಲ್ಲ. ನಿಜ ರಾಮನಿಗೆ ಅಪಚಾರ ಎಸಗಿದ್ದು ಮೋದಿ ಮತ್ತು ಸಂಘ ಪರಿವಾರ ಎಂದು ವ್ಯಂಗ್ಯಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣೆ ವೇಳೆ ಏಕರೂಪ ನಾಗರಿಕ ಸಂಹಿತೆ ಜಾರಿ ಸಂಬಂಧಿ ಪ್ರಸ್ತಾಪ ಮಾಡುತ್ತಿದ್ದಾರೆ. ಆದರೆ, ಈ ವಿಚಾರ ಸಂಸತ್ತಿನಲ್ಲಿ ಚರ್ಚೆಯಾಗಿ ಅಂಗೀಕರಿಸಬೇಕು. ಬಿಜೆಪಿಯವರು ನಿಜ ಹಿಂದೂತ್ವವಾದಿಗಳಾಗಿದ್ದರೆ ಈ ಕುರಿತು ಸಂಸತ್ತಿನಲ್ಲಿ ಅಂಗೀಕಾರ ಮಾಡಬೇಕು ಎಂದರು.
ಮೇಲ್ವರ್ಗದ ಬಡವರಿಗೆ ಶೇ. 11 ಮೀಸಲು ನೀಡುವ ಮೂಲಕ ಸಂವಿಧಾನ ಮತ್ತು ಅಂಬೇಡ್ಕರ್ ವಿಚಾರಕ್ಕೆ ದ್ರೋಹ ಎಸಗಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಯಾವ ಆಧಾರದಲ್ಲಿ ಮೀಸಲು ಕೊಡಬೇಕೆಂದು ಅವರು ಸ್ಪಷ್ಟವಾಗಿ ಬರೆದಿದ್ದಾರೆ. ಅದರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ನೀಡಬೇಕೆಂದು ಎಲ್ಲಿಯೂ ಇಲ್ಲ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟು ಅನುದಾನವನ್ನು ಆಯಾ ವರ್ಷವೇ ಖರ್ಚು ಮಾಡಬೇಕೆಂದು ಸಿದ್ದರಾಮಯ್ಯ ಕಾನೂನು ತಂದರು. ಈಗಿನ ಬೊಮ್ಮಾಯಿ ಸರ್ಕಾರ ವಿದ್ಯಾರ್ಥಿ ವೇತನ, ಸಂಶೋಧಕರಿಗೆ ಶಿಷ್ಯ ವೇತನ ನೀಡಿಲ್ಲ. ಬೆಂಗಳೂರಿನ ಕೇಶವ ಕೃಪಾ, ಹೆಡಗೇವಾರ್ ಭವನದ ನಿರ್ದೇಶನದ ಮೇರೆಗೆ ಕರ್ತವ್ಯ ನಿರ್ವಹಿಸುವ ಬಿಜೆಪಿಯರಿಗೆ ಸ್ವಾತಂತ್ರ್ಯ ಎಂಬುದೇ ಇಲ್ಲ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಬಿಜೆಪಿಯವರು ಲಘುವಾಗಿ ಮಾತಾಡುವುದು ಶೋಭೆ ತರುವುದಿಲ್ಲ. ಸ್ವಾತಂತ್ರ್ಯ ಗಳಿಸಿಕೊಟ್ಟ ಪಕ್ಷವೊಂದರ ಅಧ್ಯಕ್ಷರಾಗಿ ಸೈದ್ಧಾಂತಿಕವಾಗಿ ಯಾವ ರೀತಿ ಪಕ್ಷವನ್ನು ಮುನ್ನಡೆಸಬೇಕೆಂಬ ಶಕ್ತಿ ಖರ್ಗೆ ಅವರಿಗಿದೆ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಖಚಿತ. ಈ ಸತ್ಯ ಅರಿವಾಗಿ ಬಿಜೆಪಿಯವರು ವಾಮಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಹತಾಶರಾಗಿದ್ದಾರೆ. ರಾಜ್ಯದಲ್ಲಿ ಚುನಾವಣೆ ಕಾರ್ಮೋಡ ಕಾಣಿಸುತ್ತಿದೆ. ಮುಖ್ಯಮಂತ್ರಿ ರಾಜ್ಯದ ಆಡಳಿತ ಮರೆತಿದ್ದಾರೆ. ಮಂತ್ರಿಮಂಡಲದಲ್ಲಿ ಹೇಗೆ ಚುನಾವಣೆ ಎದುರಿಸಬೇಕೆಂಬ ಚಿಂತೆಯಲ್ಲಿ ಮಗ್ನರಾಗಿದ್ದಾರೆ. ರಾಜ್ಯವ್ಯಾಪಿ ಪ್ರವಾಸ ಮಾಡುತ್ತ ಮನಸೋ ಇಚ್ಛೆ ಮಾತಾಡುತ್ತಿದ್ದಾರೆ. ಡಬ್ಬಲ್ ಇಂಜಿನ್ ಸರ್ಕಾರ ಎಲ್ಲ ರೀತಿಯಲ್ಲೂ ವಿಫಲವಾಗಿದೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಮುಖಂಡರಾದ ಭಾಸ್ಕರ್ ಎಲ್.ಗೌಡ, ಹುಣಸೂರು ಬಸವಣ್ಣ, ಡಿ.ನಾಗಭೂಷಣ್, ಗಿರೀಶ್, ಮಹೇಶ್ ಸುದ್ದಿಗೋಷ್ಠಿಯಲ್ಲಿದ್ದರು.