Mysore
23
overcast clouds
Light
Dark

ಸೆ. 10 ರಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ : ಜೆಡಿಎಸ್‌ ಜಿಲ್ಲಾಧ್ಯಕ್ಷ ಮಂಜುನಾಥ್‌

ಹನೂರು: ಹನೂರಿನಲ್ಲಿ ಸೆಪ್ಟಂಬರ್ 10 ರಂದು ಜೆಡಿಎಸ್ ಹಾಗೂ ಬೆಂಗಳೂರಿನ ಎನ್‍ಸಿಜಿ ಕಾಂಪಿಟೇಟಿವ್ ಇನ್ಸ್ಟಿಟ್ಯೂಟ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಮಂಜುನಾಥ್ ತಿಳಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ಧ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹನೂರು ಭಾಗದ ವಿದ್ಯಾರ್ಥಿಗಳಲ್ಲಿ ಪ್ರತಿಭಾವಂತರಿದ್ದು, ಕಡು ಬಡತನ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತರಬೇತಿ ಸಿಗುತ್ತಿಲ್ಲ. ಇತ್ತ ನಗರ ಪ್ರದೇಶಗಳಲ್ಲಿ ಹಣ ನೀಡಿ ತರಬೇತಿ ಪಡೆದುಕೊಳ್ಳಲು ಶಕ್ತರಿಲ್ಲ. ಇದರಿಂದ ಪ್ರತಿಭಾವಂತರಾಗಿದ್ದರೂ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಕ್ಷೇತ್ರದಲ್ಲಿ ನಿರುದ್ಯೋಗದ ಸಮಸ್ಯೆ ಎದುರಾಗಿದೆ. ಇದನ್ನು ಮನಗಂಡು ವಿದ್ಯಾರ್ಥಿಗಳ ಭವಿಷ್ಯದ ದೂರ ದೃಷ್ಠಿಯಿಂದ ಅನುಕೂಲ ಕಲ್ಪಿಸುವ ಸಲುವಾಗಿ ಜೆಡಿಎಸ್ ಹಾಗೂ ಬೆಂಗಳೂರು ಎನ್‍ಸಿಜಿ ಕಾಂಪಿಟೇಟಿವ್ ಇನ್ಸ್ಟಿಟ್ಯೂಟ್ ವತಿಯಿಂದ ಕೆಎಎಸ್, ಪಿಎಸೈ, ಎಫ್‍ಡಿಎ, ಎಸ್‍ಡಿಎ ಸೇರಿದಂತೆ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸುಮಾರು 3 ತಿಂಗಳ ಕಾಲ ಉಚಿತವಾಗಿ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಎನ್‍ಸಿಜಿ ಸಂಸ್ಥೆಯ ಮುಖ್ಯಸ್ಥ ನಾಗಪ್ಪ ಮಾತನಾಡಿ, ಹನೂರು ಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆದಿದ್ದಾರೆ. ಆದರೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ ಸಿಗುತ್ತಿರಲಿಲ್ಲ. ಆಗಾಗಿ ವಿದ್ಯಾರ್ಥಿಗಳಿಗೆ ತರಬೇತಿ ಅಗತ್ಯತೆ ಇತ್ತು. ಈ ದಿಸೆಯಲ್ಲಿ ಇದೀಗ ಪ್ರಥಮ ಬಾರಿಗೆ ಹನೂರಿನಲ್ಲಿ ಎಂ.ಆರ್ ಮಂಜುನಾಥ್ ನೇತೃತ್ವದಲ್ಲಿ ಉಚಿತವಾಗಿ ತರಬೇತಿ ನೀಡುತ್ತಿರುವುದು ಉತ್ತಮವಾದ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಾಗ್ಯದ ರವಿಕುಮಾರ್, ನಾಗೇಂದ್ರಬಾಬು, ಶಿವಮೂರ್ತಿ, ಶಾಹಿಲ್, ರಾಜುಗೌಡ, ಮಹದೇವ, ಡಿ.ಕೆ ಸುರೇಶ್, ಮಹದೇವ, ಸತೀಶ್ ಹಾಗೂ ಇನ್ನಿತರರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ