ಚಾಮರಾಜನಗರ: ರಾಜ್ಯದಲ್ಲಿ ಶೇ.೪೦ ಕಮಿಷನ್ ದಂಧೆ ನಡೆಯುತ್ತಿರುವುದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಆರೋಪಿಸಿದ್ದು ಈ ಕುರಿತು ಸಮಗ್ರ ತನಿಖೆಗೆ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, ಈಗಲೂ ರಾಜ್ಯದಲ್ಲಿ ಶೇ 40 ಕಮಿಷನ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದು ಅತ್ಯಂತ ಭ್ರಷ್ಟ ಸರ್ಕಾರ. ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಭ್ರಷ್ಟರಾಗಿದ್ದಾರೆ. ಇಂತಹ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಲ್ಲ. ಅತಿಯಾದ ಭ್ರಷ್ಟಾಚಾರದಲ್ಲಿ ನಿರತರಾಗಿರುವ ಒಬ್ಬ ಸಚಿವರ ವಿರುದ್ಧ ಶೀಘ್ರದಲ್ಲೇ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇವೆ ಎಂದು ಎಂದು ಕಿಡಿ ಕಾರಿರುವುದು ರಾಜ್ಯ ಸರ್ಕಾರದ ಮಹಾ ಭ್ರಷ್ಟಾಚಾರಕ್ಕೆ ಹಿಡಿದಿರುವ ಕನ್ನಡಿಯಾಗಿದೆ ಎಂದು ದೂರಿದ್ದಾರೆ.
ಈ ಬಗ್ಗೆ, ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ. ಶಿವಸೇನೆ, ಆಮ್ ಆದ್ಮಿ, ಕಾಂಗ್ರೆಸ್, ಆರ್ ಜೆ ಡಿ ಮುಂತಾದ ವಿರೋಧ ಪಕ್ಷಗಳ ನಾಯಕರುಗಳ ಮೇಲೆ ಐಟಿ, ಇಡಿ, ಸಿಬಿಐ ದಾಳಿ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ, ತಮ್ಮದೇ ಬಿಜೆಪಿ ಸರ್ಕಾರದ ಮೇಲೆ ಇಷ್ಟೆಲ್ಲಾ ಆರೋಪಗಳಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ. ಇದು ಕೇಂದ್ರದ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ.
ತಕ್ಷಣ ಉನ್ನತ ತನಿಖೆ ಕೈಗೊಂಡು ಭ್ರಷ್ಟ ಸಚಿವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.