ಹನೂರು: ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿ ವಿಲೇಜ್ ಉಡುತೊರೆ ಹಳ್ಳಕ್ಕೆ ನಿರ್ಮಾಣ ಮಾಡಿರುವ ಸೇತುವೆಯನ್ನು ದುರಸ್ತಿ ಪಡಿಸುವಂತೆ ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಜರುಗಿದೆ.
ಅಂತರರಾಜ್ಯ ಕೊಳ್ಳೇಗಾಲದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿರುವ ಜಿ ವಿಲೇಜ್ ಸೇತುವೆ ದುರಸ್ತಿಗೊಂಡು ವರ್ಷವೇ ಕಳೆದರೂ ಸಹ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ದಿಡೀರ್ ಪ್ರತಿಭಟನೆ ನಡೆಸಿದರು.
ಕಳೆದ ತಿಂಗಳು ಬಿಆರ್ ಟಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆ ಸುಮಾರು ಹದಿನೈದು ದಿನಗಳ ಕಾಲ ಹಳ್ಳ ಉಕ್ಕಿ ಹರಿದ ಪರಿಣಾಮ ರಸ್ತೆಯ ಬಲಬದಿಯಲ್ಲಿ ಸೇತುವೆ ಕುಸಿದಿತ್ತು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಾತ್ಕಾಲಿಕವಾಗಿ ಕಲ್ಲು ಮುಚ್ಚಿ ಕಾಂಕ್ರೀಟ್ ಹಾಕಿದ್ದರು. ಬುಧವಾರ ರಸ್ತೆಯ ಎಡಬದಿಯಲ್ಲಿ ಸೇತುವೆ ಕುಸಿದ ಪರಿಣಾಮ ವಾಹನ ಸಂಚಾರಕ್ಕೆ ತೊಡಕಾಗಿದೆ. ಆದ್ದರಿಂದ ಹೊಸ ಮೇಲ್ಸೇತುವೆಯನ್ನು ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪಿ ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮುಳುಗು ಸೇತುವೆಗಳನ್ನು ಮೇಲ್ದರ್ಜೆಗೇರಿಸುವಂತೆ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಪರಿವರ್ತನ ಸಮಿತಿ ಅಧ್ಯಕ್ಷ ಎನ್ ಕೃಷ್ಣಮೂರ್ತಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಎ ಇ ಇ ಲೋಕೋಪಯೋಗಿ ಇಲಾಖೆ ಕೊಳ್ಳೆಗಾಲ ಉಪವಿಭಾಗದ ಅಧಿಕಾರಿ ರಾಜೇಶ್ ಮುನ್ಸಿ ಅವರು ಜೀ ವಿಲೇಜ್ ಸಮೀಪ ಸೇತುವೆ ಕುಸಿದಿರುವುದು ಗಮನಕ್ಕೆ ಬಂದಿದೆ ಈಗಾಗಲೇ ಮೇಲ್ಸೇತುವೆ ನಿರ್ಮಾಣ ಮಾಡಲು ಇಲಾಖೆಗೆ ಪತ್ರ ಬರೆಯಲಾಗಿದೆ. ತಾತ್ಕಾಲಿಕವಾಗಿ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.