ಚಾಮರಾಜನಗರ: ಜಿಲ್ಲೆಯ ಇಬ್ಬರು ಐಎಫ್ಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿ ಬುಧವಾರ ಸಂಜೆ ಆದೇಶ ಹೊರಡಿಸಿದೆ. ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಹಾಗೂ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ಕುಮಾರ್ ಅವರನ್ನು ವರ್ಗಾಯಿಸಲಾಗಿದೆ..
ಸಂತೋಷ್ ಅವರನ್ನು ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮಕ್ಕೆ, ವಿ.ಏಡುಕುಂಡಲು ಅವರನ್ನು ಕೋಲಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಜನಪ್ರಿಯ ಹಾಗೂ ಹಲವು ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಮನ ಗೆದ್ದಿದ್ದ ಹಾಗು ಕ್ರಿಯಾಶೀಲ ಅಧಿಕಾರಿ ಏಡುಕುಂಡಲು ಅವರ ವರ್ಗಾವಣೆಗೆ ಜನರು ಅಸಮಾಧಾನ ಹೊರಹಾಕಿದ್ದಾರೆ.
ಮೈಸೂರು ಕಾರ್ಯ ಯೋಜನೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ದೀಪಾ ಜೆ. ಕಾಂಟ್ರಾಕ್ಟರ್ ಅವರನ್ನು ಬಿಆರ್‌ಟಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಈ ಹಿಂದೆ, ಸಚಿವ ಉಮೇಶ್ ಕತ್ತಿ ಬಂದಿದ್ದ ವೇಳೆ ಏಡುಕುಂಡಲು ಅವರನ್ನು ಸದ್ಯಕ್ಕೆ ವರ್ಗಾವಣೆ ಮಾಡಬಾರದು ಎಂದು ರೈತ ಮುಖಂಡರು ಒತ್ತಾಯಿಸಿ ಮನವಿ ಪತ್ರ ಕೊಟ್ಟಿದ್ದರು.