ಹನೂರು: ಕಾವೇರಿ ವನ್ಯಜೀವಿ ಧಾಮ, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಅರಣ್ಯದ ಸುತ್ತಮುತ್ತ ಮಾನವ- ವನ್ಯಜೀವಿ ಸಂಘರ್ಷ ತಡೆಗೆ ಆನೆ ಕಂದಕ, ಟೆಂಟಕಲ್ ಫೆನ್ಸಿಂಗ್, ಸೌರ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು 157 ಕೋಟಿ ರೂ. ಹೆಚ್ಚುವರಿಯಾಗಿ ನೀಡಲು ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 88 ಕಿ.ಮೀ. ರೈಲ್ವೆ ಬ್ಯಾರಿಕೇಡ್, 53 ಕಿ.ಮೀ. ಆನೆ ಕಂದಕ, 50 ಕಿ.ಮೀ. ಸೌರ ತೂಗು ಬೇಲಿ (ಸೋಲಾರ್ ಟೆಂಟಕಲ್ ಫೆನ್ಸಿಂಗ್) ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಮಾನವ ವನ್ಯಜೀವಿ ಅದರಲ್ಲೂ ಆನೆಗಳಿಂದ ಬೆಳೆಹಾನಿ, ಜೀವಹಾನಿ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ ಕಾಡುಹಂದಿಯನ್ನು ಸಾಯಿಸಲು ಕಡಿಮೆ ತೀವ್ರತೆಯ ಕಚ್ಚಾ ಬಾಂಬ್ ತಯಾರಿಸಿ ಇಡಲಾಗುತ್ತಿದ್ದು, ಇದನ್ನು ತಿಂದು ಜಾನುವಾರುಗಳು ಮತ್ತು ವನ್ಯಜೀವಿಗಳುವ ಸಾವಿಗೀಡಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಕೂಡಲೇ ಈ ಬಗ್ಗೆ ನಿಗಾ ಇಟ್ಟು, ಕಚ್ಚಾ ಬಾಂಬ್ ಇಡುವವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಲು ಸೂಚನೆ ನೀಡಿದರು.





