ಹನೂರು : ಬಾಳೆಗೊನೆ ಕಟಾವು ಮಾಡಿ ಸ್ವಗ್ರಾಮಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿಮಾಡಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ಜರುಗಿದೆ.
ತಮಿಳುನಾಡಿನ ಈರೋಡ್ ಜಿಲ್ಲೆ ಸತ್ತಿ ತಾಲೂಕಿನ ಮಾಕನ ಪಾಳ್ಯ ಗ್ರಾಮದ ಶಿವಮೂರ್ತಿ (50)ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.
ಘಟನೆಯ ವಿವರ :
ಹನೂರು ತಾಲೂಕಿನ ಹೂಗ್ಯಂ ಗ್ರಾಮದ ಜಮೀನೊಂದರಲ್ಲಿ ಕಟಾವಿಗೆ ಬಂದಿದ್ದ ಬಾಳೆಗೊನೆಯನ್ನು ಕಟಾವು ಮಾಡಿ ಕೆಲಸ ಮುಗಿದ ನಂತರ ಸ್ವಗ್ರಾಮಕ್ಕೆ ಎರಡು ಬೈಕಿನಲ್ಲಿ ನಾಲ್ವರು ಕೂಲಿ ಕಾರ್ಮಿಕರು ತೆರಳುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಕಾಡಾನೆ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಶಿವಮೂರ್ತಿ ಮೇಲೆ ದಾಳಿ ನಡೆಸಿದೆ. ಸವಾರ ದ್ವಿಚಕ್ರವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಶಿವಮೂರ್ತಿ ಕಾಡಾನೆ ದಾಳಿಗೆ ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ಇದನ್ನು ಓದಿ : ಮೈಸೂರು ಮೃಗಾಲಯದಲ್ಲಿ 9 ಮಂದಿ ಮಾತ್ರ ಖಾಯಂ ನೌಕರರಿದ್ದಾರೆ: ಸಚಿವ ಈಶ್ವರ್ ಖಂಡ್ರೆ
ದ್ವಿಚಕ್ರ ವಾಹನ ಸವಾರನ ಮೇಲೆ ದಾಳಿ ನಡೆಸಿದ ತಾಯಿ ಮತ್ತು ನಾಲ್ಕು ಆನೆ ಮರಿಗಳು ಹಳ್ಳದ ಸಮೀಪದಲ್ಲಿಯೇ ಬೀಡು ಬಿಟ್ಟಿರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ರಸ್ತೆ ಮೂಲಕ ಹೋಗುವವರಿಗೆ ನಿರ್ಬಂಧ ವಿಧಿಸಿದ್ದಾರೆ.
ಈ ಸಂಬಂಧ ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್, ಹೂಗ್ಯ ವಲಯ ಅರಣ್ಯ ಅಧಿಕಾರಿ ಜಿತೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮೃತಪಟ್ಟ ವ್ಯಕ್ತಿಯ ಶವವನ್ನು ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





