ಮಹಾದೇಶ್ ಎಂ ಗೌಡ
ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ ನಾಶ ಮಾಡಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಹನೂರು ತಾಲ್ಲೂಕಿನ ತಲೆಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆವಿಎನ್ ದೊಡ್ಡಿ ಗ್ರಾಮದ ಶಂಕರ ಎಂಬ ರೈತನ ಜಮೀನಿಗೆ ಕಾಡಾನೆ ದಾಳಿ ನಡೆಸಿ, ತೆಂಗಿನ ಮರಗಳು ಹಾಗೂ ಮುಸುಕಿನ ಜೋಳ ಬೆಳೆ ಸಂಪೂರ್ಣವಾಗಿ ನಾಶಗೊಳಿಸಿದೆ. ಅಲ್ಲದೆ ಜಮೀನಿನಲ್ಲಿದ್ದ ಸೋಲಾರ್ ತಂತಿ ಬೇಲಿಯನ್ನೂ ತುಳಿದು ಹಾನಿಗೊಳಿಸಿದೆ.
ಈ ಕುರಿತು ರೈತ ಶಂಕರ ಮಾತನಾಡಿ, “ಕಾಡಾನೆ ದಾಳಿಯಿಂದ ನನ್ನ ಜೀವನಾಧಾರವಾದ ಬೆಳೆ ಸಂಪೂರ್ಣ ನಾಶವಾಗಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ನಷ್ಟ ಪರಿಹಾರ ನೀಡಬೇಕು. ಗ್ರಾಮದಲ್ಲಿ ನಿರಂತರವಾಗಿ ಕಾಡಾನೆಗಳ ಓಡಾಟದಿಂದ ರೈತರು ಭಯಭೀತರಾಗಿದ್ದಾರೆ” ಎಂದು ಅಳಲು ತೋಡಿಕೊಂಡರು.
ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಂಡು ಕಾಡಾನೆಗಳ ನಿಯಂತ್ರಣ ಹಾಗೂ ರೈತರ ಬೆಳೆ ರಕ್ಷಣೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.




