ಹನೂರು: ನರೇಗಾ ಯೋಜನೆಯಡಿಯಲ್ಲಿ ಕೂಲಿ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ದೊಮ್ಮನಗದ್ದೆ ಗ್ರಾಮಸ್ಥರು ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದರು.
ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ಮುಂಭಾಗ ಜಮಾಯಿಸಿದ ದೊಮ್ಮನಗದ್ದೆ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ವಿವಿಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ದೊಮ್ಮನಗದ್ದೆ ಗ್ರಾಮಸ್ಥೆ ಕೃಷ್ಣವೇಣಿ ಮಾತನಾಡಿ, ನರೇಗಾ ಯೋಜನೆಯಡಿಯಲ್ಲಿ ನೂರು ದಿನಗಳ ಕೆಲಸ ಕೊಡಬೇಕೆಂದು ನಿಯಮ ಇದೆ. ಆದರೆ ನಮಗೆ ನೂರು ದಿನಗಳ ಕಾಲ ಕೆಲಸ ಕೊಟ್ಟಿದ್ದಾರೆಯೇ? ಕೇವಲ ಐದು ದಿನ ಕೆಲಸ ಕೊಟ್ಟು ಕೆಲಸ ನಿಲ್ಲಿಸಿ ಎಂದು ಹೇಳುತ್ತಾರೆ. ಜೊತೆಗೆ ಐದು ದಿನಗಳ ಕಾಲ ನಡೆದಿರುವ ಕಾಮಗಾರಿಯ ಹಣ ಸಹ ಬಂದಿಲ್ಲ. ಇದರಿಂದ ಜೀವನ ನಿರ್ವಹಣೆಯೇ ತೊಂದರೆಯಾಗಿದೆ. ಐದು ದಿನ ಕೆಲಸ ನೀಡಿ ಮತ್ತೆ ಕೆಲಸ ನಿಲ್ಲಿಸಿ ಎಂಬುದು ಯಾವ ರೀತಿಯ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾಗಿ ಕೂಲಿಯನ್ನು ನಂಬಿ ಬದುಕುತ್ತಿರುವ ನಮಗೆ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಬೇಕೆಂದು ಆಗ್ರಹಿಸಿದರು.
ಇದನ್ನು ಓದಿ : ನವೆಂಬರ್.20ರಂದು ಮೈಸೂರಿನಲ್ಲಿ ಕೌದಿ ನಾಟಕ ಪ್ರದರ್ಶನ
ನೂರು ದಿನಗಳ ಕಾಲ ಕೆಲಸ ನೀಡದೇ ಇರುವುದರಿಂದ ಗ್ರಾಮಸ್ಥರು ಗ್ರಾಮವನ್ನೇ ತೊರೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಅನೇಕರು ಗ್ರಾಮ ತೊರೆದು ಬೇರೆ ಕೆಲಸಕ್ಕೆ ತೆರಳಿದ್ದಾರೆ. ಹೀಗಿರುವಾಗ ಇರುವವರಿಗಾದರೂ ಕೂಡ ಕೆಲಸ ಕೊಡಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಆಡಳಿತ ಗಮನಹರಿಸಬೇಕು. ಆ ಮೂಲಕ ಗುಳೆ ಹೋಗುತ್ತಿರುವ ಜನರನ್ನು ತಡೆಯಬೇಕು ಎಂದು ಮನವಿ ಸಹ ಮಾಡಿದರು.
ಇದೇ ಸಂದರ್ಭದಲ್ಲಿ ದೊಮ್ಮನಗದ್ದೆ ಗ್ರಾಮಸ್ಥರಾದ ಮಾದಪ್ಪ, ಮಾದ, ಚಂದ್ರಮ್ಮ ಮಾದೇವಿ, ಮುತ್ತ, ಕೃಷ್ಣವೇಣಿ, ಪಳನಿ ಸ್ವಾಮಿ, ಪಳನಿಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರುವವರಿಗೆ ನೂರು ದಿನ ಕಡ್ಡಾಯವಾಗಿ ಕೆಲಸ ನೀಡಲಾಗುತ್ತಿದೆ ಆದರೆ ಕೆಲವರು ಈ ಕೆವೈಸಿ ಮಾಡದೇ ಇರುವುದರಿಂದ ಹಣ ಅವರ ಖಾತೆಗೆ ಜಮೆಯಾಗಿಲ್ಲ. ಕಳೆದ ಒಂದು ವಾರದಿಂದ ಈಕೆ ವೈಸಿ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ. ಮಂಗಳವಾರವು ದೊಮ್ಮನಗದ್ದೆ ಗ್ರಾಮದ 25 ಜನರಿಗೆ ಈಕೆ ವೈಸಿ ಮಾಡಲಾಗಿದ್ದು, ಬುಧವಾರದಿಂದಲೇ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲಾಗುವುದು ಎಂದು ಅಜ್ಜೀಪುರ ಗ್ರಾಮ ಪಂಚಾಯಿತಿ ಪಿಡಿಓ ಸುರೇಶ್ ಭರವಸೆ ನೀಡಿದರು.





