ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದ 5 ಹುಲಿಗಳ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಲಿಗಳ ಸಾವಿಗೆ ಕಾರ್ಬೋಫುರಾನ್ ಕೀಟನಾಶಕ ಬಳಕೆಯಾಗಿರುವುದು ದೃಢಪಟ್ಟಿದೆ.
ಈ ಬಗ್ಗೆ ಮಾತನಾಡಿರುವ ಸಿಸಿಎಫ್ ಹೀರಾಲಾಲ್ ಅವರು, ಹುಲಿ ಸಾಯಿಸಲು ಯಾವ ಕೀಟನಾಶಕ ಬಳಸಲಾಗಿದೆ ಎಂದು ತಿಳಿಯಲು ಪ್ರಯೋಗಾಲಯಕ್ಕೆ ಹುಲಿಯ ಅಂಗಾಂಗಗಳನ್ನು ರವಾನೆ ಮಾಡಲಾಗಿತ್ತು. ಇದೀಗ ಲ್ಯಾಬ್ ವರದಿ ಕೂಡ ಸಿಕ್ಕಿದ್ದು, ಕಾರ್ಬೋಫುರಾನ್ ಎಂಬ ಕೀಟನಾಶಕವನ್ನು ಹಸುವಿಗೆ ಸಿಂಪಡಿಸಿದ್ದಾರೆಂದು ಗೊತ್ತಾಗಿದೆ ಎಂದರು.
ಈ ಕೀಟನಾಶಕವು ವನ್ಯಪ್ರಾಣಿಗಳು, ಪಕ್ಷಿಗಳ ನರಮಂಡಲದ ಮೇಲೆ ತುಂಬಾನೇ ದುಷ್ಪರಿಣಾಮ ಬೀರುತ್ತವೆ ಎಂದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದರು.
ಐದು ಹುಲಿಗಳು ಕೂಡ ವಿಷ ಪ್ರಾಶನದಿಂದಲೇ ಸಾವನ್ನಪ್ಪಿವೆ ಎಂಬುದು ಲ್ಯಾಬ್ ವರದಿಯಿಂದ ಗೊತ್ತಾಗಿದೆ. ಇನ್ನೆರಡು ದಿನಗಳಲ್ಲಿ ಉನ್ನತ ಮಟ್ಟದ ತನಿಖಾ ತಂಡ ಅರಣ್ಯ ಸಚಿವರಿಗೆ ವರದಿ ಸಲ್ಲಿಸಲಿದ್ದು, ಮತ್ತಷ್ಟು ಸ್ಫೋಟಕ ವಿಚಾರ ಬಹಿರಂಗವಾಗುವ ಸಾಧ್ಯತೆಯಿದೆ.





