ಹನೂರು: ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಬರುತ್ತಿದ್ದು, ಇಂದು ಕೂಡ ಜನಜಂಗುಳಿಯಿಂದ ಕೂಡಿದೆ.
ತೆಪ್ಪವಿಹಾರದಲ್ಲಿ ಪ್ರವಾಸಿಗರು: ತಾಲ್ಲೂಕಿನ ಗಡಿ ಭಾಗದಲ್ಲಿರುವ ಹೊಗೇನಕಲ್ ಜಲಪಾತ ವೀಕ್ಷಿಸಲು ರಾಜ್ಯದ ನಾನಾ ಭಾಗಗಳಿಂದ ವೀಕೆಂಡ್ ರಜಾ ದಿನಗಳನ್ನು ಕಳೆಯಲು ಪ್ರವಾಸಿಗರು ತಮಿಳುನಾಡಿನಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ತೆಪ್ಪ ವಿಹಾರಕ್ಕೆ ಅಪಾರ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದು, ಜಲಪಾತ ವೀಕ್ಷಿಸಲು ಮುಗಿಬಿದ್ದರು.
ವರ್ಷಾಂತ್ಯದಲ್ಲಿ ಪ್ರವಾಸಿಗರ ದಂಡು: ಕರ್ನಾಟಕದ ನಯಾಗರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೆನಕಲ್ ಜಲಪಾತವನ್ನು ವೀಕ್ಷಿಸಲು ಮತ್ತು ಅಲ್ಲಿನ ಪ್ರೇಕ್ಷಣೀಯ ಕಲ್ಲು ಬಂಡೆಗಳ ನಡುವೆ ಚಿಮ್ಮುವ ನೀರಿನ ರಭಸದ ಜೊತೆಗೆ ಅಲ್ಲಿನ ದೃಶ್ಯಕಾವ್ಯವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿ ಪ್ರಕೃತಿಯ ಸೌಂದರ್ಯ ಸವಿಯುತ್ತಿದ್ದಾರೆ.
ಕಣ್ಮನ ಸೆಳೆಯುವ ತೆಪ್ಪವಿಹಾರ: ಜಲಪಾತ ವೀಕ್ಷಿಸಲು ಬಂದಂತ ಪ್ರವಾಸಿಗರು ತೆಪ್ಪದಲ್ಲಿ ತೆರಳುವ ವೇಳೆಯಲ್ಲಿ ಮೊಬೈಲ್ ನಲ್ಲಿ ವಿಹಾರವನ್ನು ಸೆರೆಹಿಡಿದು ಖುಷಿ ಪಡುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದು, ತೆಪ್ಪಗಳು ಮಣಿ ಜೋಡಣೆಯಂತೆ ಒಂದರ ಹಿಂದೆ ಸಾಲಾಗಿ ಸಾಗುತ್ತಿರುವ ದೃಶ್ಯ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.
ಬಳಿಕ ಅಲ್ಲಿ ಮಸಾಜ್ ಮಾಡಿಸಿಕೊಳ್ಳಲು ಸಹ ಪ್ರವಾಸಿಗರು ಮುಗಿಬಿದ್ದಿದ್ದು, ವರ್ಷಾಂತ್ಯದಿಂದ ಜಂಜಾಟದಲ್ಲಿದ್ದ ಪ್ರವಾಸಿಗರಿಗೆ ಉತ್ತಮ ವಾತಾವರಣ ಕಂಡು ಬಂದಿದೆ.





