ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು, ವಾರಾಂತ್ಯದಲ್ಲಿ ಜಲಪಾತ ಜನಜಂಗುಳಿಯಿಂದ ಕೂಡಿತ್ತು.
ಹೊಗೇನಕಲ್ ಜಲಪಾತ ವೀಕ್ಷಿಸಲು ರಾಜ್ಯದ ನಾನಾ ಭಾಗಗಳಿಂದ, ತಮಿಳುನಾಡಿನಿಂದ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ತೆಪ್ಪದಲ್ಲಿ ವಿಹಾರ ಮಾಡಿ ಸಂತಸಪಟ್ಟರು.
ಕಲ್ಲು ಬಂಡೆಗಳ ನಡುವೆ ಚಿಮ್ಮುವ ರುದ್ರರಮಣೀಯ ಜಲಪಾತವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಪ್ರವಾಸಿಗರು ತೆಪ್ಪದಲ್ಲಿ ತೆರಳುವ ವೇಳೆಯಲ್ಲಿ ಮೊಬೈಲ್‌ನಲ್ಲಿ ಜಲಪಾತದ ಸೌಂದರ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದು, ತೆಪ್ಪಗಳು ಮಣಿ ಜೋಡಣೆಯಂತೆ ಒಂದರ ಹಿಂದೆ ಒಂದು ಸಾಲಾಗಿ ಸಾಗುತ್ತಿರುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.





