ಚಾಮರಾಜನಗರ : ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದಲ್ಲಿ ನಿನ್ನೆ(ಜೂ.26)ಸಿಕ್ಕಿದ್ದ ಐದು ಹುಲಿಗಳ ಕಳೇಬರದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಐದು ಹುಲಿಗಳು ವಿಷಪ್ರಾಶನದಿಂದಲೇ ಸಾವನ್ನಪ್ಪಿರುವ ಬಗ್ಗೆ ದೃಢವಾಗಿದೆ ಎಂದು ಚಾಮರಾಜನಗರ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ತಿಳಿಸಿದರು.
ಹುಲಿ ಹಾಗೂ ಅಣತಿ ದೂರದಲ್ಲೇ ಸಿಕ್ಕಿದ್ದ ಹಸುವಿನ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಹುಲಿಗಳ ದೇಹ ಸೇರಿರುವ ವಿಷ ಯಾವುದು, ಪ್ರಮಾಣ ಎಷ್ಟು ಎಂಬ ಮಾಹಿತಿ ವರದಿ ಬಂದ ಬಳಿಕ ತಿಳಿಯಲಿದೆ ಎಂದು ಹುಲಿಗಳ ಮರಣೋತ್ತರ ಪರೀಕ್ಷೆಯ ಬಳಿಕ ಮಾಹಿತಿ ನೀಡಿದರು.
ಐದು ಹುಲಿಗಳು ಮೂರು ದಿನಗಳ ಹಿಂದೆಯೇ ಮೃತಪಟ್ಟಿವೆ. ತಾಯಿ ಹುಲಿಗೆ 10 ವರ್ಷ ಹಾಗೂ ಮರಿಗಳಿಗೆ 8 ರಿಂದ 10 ತಿಂಗಳಾಗಿದೆ. ಸದ್ಯ ಘಟನೆ ಬಗ್ಗೆ ತನಿಖೆ ನಡೆಯುತ್ತದೆ, ಹುಲಿ ಬೇಟೆಯಾಡಿದ ಬಳಿಕ ಹಸುವಿನ ಕಳೇಬರಕ್ಕೆ ವಿಷ ಹಾಕಲಾಯಿತೇ ಅಥವಾ ವಿಷಪ್ರಾಶನದ ಹಸುವನ್ನು ಕಾಡಿನೊಳಗೆ ಇರಿಸಲಾಗಿತ್ತೇ ಎಂಬ ಮಾಹಿತಿ ಕಲೆ ಹಾಕುತ್ತಿದೆ. ಇತ್ತ ಮೃತ ಜಾನುವಾರ ಮಾಲೀಕನ ಪತ್ತೆ ಕಾರ್ಯವು ನಡೆಯುತ್ತಿದೆ ಎಂದು ತಿಳಿಸಿದರು.
ಘಟನಾ ಸ್ಥಳಕ್ಕೆ ಖಂಡ್ರೆ ಭೇಟಿ: ಹುಲಿ ಮೃತದೇಹ ಸಿಕ್ಕ ಮೀಣ್ಯಂ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಹಸುವಿನ ಕಳೇಬರಕ್ಕೆ ವಿಷ ಹಾಕಿದ್ದು ಯಾರು ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಘಟನಾ ಸ್ಥಳಕ್ಕೆ ತೆರಳಿದ್ದು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.





