ಹನೂರು : ಮಲೆಮಹದೇಶ್ವರ ವನ್ಯಜೀವಿಧಾಮ ಪಚ್ಚೆದೊಡ್ಡಿ ಸಮೀಪ ಹುಲಿ ಕೊಂದು ಮೂರು ಪೀಸ್ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದೆ.
ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ವ್ಯಕ್ತಿ ಅರಣ್ಯ ಇಲಾಖೆ ವಶದಲ್ಲಿರುವಾತ, ಹುಲಿಯನ್ನು ಕೊಂದು ಮೂರು ಭಾಗಗಳಾಗಿ ತುಂಡರಿಸಿ ಅರಣ್ಯದಲ್ಲೇ ಹುದುಗಿಸಿಟ್ಟಿದ್ದ ಗುಮಾನಿ ಮೇಲೆ ಈತನನ್ನು ವಶಕ್ಕೆ ಪಡೆದಿದ್ದು ಪ್ರತಿಕಾರಕ್ಕೆ ಈತ ಹುಲಿ ಕೊಂದಿದ್ದಾನೆಂದು ಉನ್ನತ ಮೂಲಗಳು ಆಂದೋಲನಕ್ಕೆ ತಿಳಿಸಿವೆ.
ಹುಲಿ ಹತ್ಯೆಯಲ್ಲಿ ಈತನೊಬ್ಬನೇ ಭಾಗಿಯಾದನೇ, ಈತನಿಗೆ ಯಾರದಾರೂ ಕೈ ಜೋಡಿಸಿದರೇ, ಭಾರೀ ಗಾತ್ರದ ಹುಲಿಯನ್ನು ಈತ ಕೊಂದಿದ್ದು ಹೇಗೆ? ಎಂಬುದು ವಿಚಾರಣೆ ಬಳಿಕ ತಿಳಿದುಬರಬೇಕಿದೆ.
ಇದನ್ನೂ ಓದಿ:-ಕಲ್ತುಳಿತ | ವಿಜಯ್ ಬಳಸಿದ್ದ ಪ್ರಚಾರದ ಬಸ್ ಎಸ್‌ಐಟಿ ವಶಕ್ಕೆ
ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದ ಬಗ್ಗೆ ಮಲೆಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ಪ್ರತಿಕ್ರಿಯಿಸಿ, ಪಚ್ಚೆದೊಡ್ಡಿ ಗ್ರಾಮದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಬಳಿಕವಷ್ಟೇ ಮಾಹಿತಿ ಬಹಿರಂಗಗೊಳಿಸಲಾಗುವುದು, ಹುಲಿ ಕೊಂದ ಬಗೆ ಬಗ್ಗೆ ಎಫ್ಎಸ್ಎಲ್ ವರದಿ ಕಾಯುತ್ತಿದ್ದೇವೆ ಎಂದು ಹೇಳಿದರು.
ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ
ಅರಣ್ಯ ಸಚಿವ ಈಶ್ವರ್ ಖಂಡ್ರೆ ಹುಲಿ ಹತ್ಯೆ ಕೇಸನ್ನು ಗಂಭೀರವಾಗಿ ಪರಿಗಣಿಸಿ ಪಿಸಿಸಿಎಫ್ ಸ್ಮಿತಾ ನೇತೃತ್ವದಲ್ಲಿ ತನಿಖೆ ನಡೆಸಿ 8 ದಿನಗಳಲ್ಲಿ ವರದಿ ಕೊಡುವಂತೆ ಸೂಚಿಸಿದ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಪಿಸಿಸಿಎಫ್ ಸ್ಮಿತಾ ಬಿಜ್ಜೂರು, ಎಪಿಸಿಸಿಎಫ್ ರಮೇಶ್ ತ್ರಿಪಾಠಿ, ಹುಲಿ ಯೋಜನೆಗಳ ಮೈಸೂರು ವಿಭಾಗದ ನಿರ್ದೇಶಕ ರಮೇಶ್ ಕುಮಾರ್ ತಂಡ ಸ್ಥಳಕ್ಕೆ ಭೇಟಿ ಕೊಟ್ಟು ಹುಲಿ ಕಳೇಬರ ದೊರೆತ ಸ್ಥಳಗಳನ್ನು ಜಾಲಾಡಿದರು.
ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಸಮಗ್ರ ಮಾಹಿತಿ ಪಡೆದ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲನೆ ನಡೆಸಿದರು.





