ಹನೂರು : ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸೋಮವಾರ ಮುಂಜಾನೆ 3 ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.
ರಾಜ್ಯದ ವಿವಿಧ ಭಾಗಗಳಿಂದ ಮಹದೇಶ್ವರ ಬೆಟ್ಟಕ್ಕೆ ಬಂದ ಭಕ್ತರು, ಸಂಕಮ್ಮ ನಿಲಯದ ಬಳಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ರಾತ್ರಿ ವಾಸ್ತವ್ಯ ಹೂಡುತ್ತಾರೆ. ಅದರಂತೆ ಸೋಮವಾರವೂ ಭಕ್ತಾದಿಗಳು ವಾಸ್ತವ್ಯ ಹೂಡಿದ್ದರು. ಮಧ್ಯರಾತ್ರಿ 1 ಗಂಟೆಯ ವೇಳೆಗೆ 3 ದ್ವಿಚಕ್ರ ವಾಹನಗಳಿಗೆ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ದ್ವಿಚಕ್ರ ವಾಹನಕ್ಕೆ ಬೆಂಕಿ ಹೊತ್ತಿ ಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿ, ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ 3 ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದವು.
ಈ ಘಟನೆಯು ಉದ್ದೇಶಪೂರ್ವಕವಾಗಿ ನಡೆದಿದೆಯೋ ಅಥವಾ ಆಕಸ್ಮಿಕವಾಗಿ ಸಂಭವಿಸಿದೆಯೋ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಉಂಟಾಗಿದೆ. ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
ಇದನ್ನ ಓದಿದ್ರಾ..?:- ಇರಾನ್-ಇಸ್ರೇಲ್ ಸಂಘರ್ಷ: ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ತಲ್ಲಣ
ಸೋಮವಾರ ರಾತ್ರಿ 1 ಗಂಟೆಯಲ್ಲಿ 3 ಬೈಕ್‌ಗಳಿಗೆ ಬೆಂಕಿ ಹೊತ್ತಿಕೊಂಡ ಮಾಹಿತಿ ತಿಳಿದ ತಕ್ಷಣ ನಮ್ಮ ಸಿಬ್ಬಂದಿ ತೆರಳಿ ಬೆಂಕಿಯನ್ನು ನಂದಿಸಿದ್ದಾರೆ. ಕರ್ನಾಟಕದ ಎರಡು ತಮಿಳುನಾಡು ಮೂಲದ ಒಂದು ಬೈಕ್ ಸುಟ್ಟುಹೋಗಿದೆ. ಮೇಲ್ನೋಟಕ್ಕೆ ಬೆಂಕಿ ಆಕಸ್ಮಿಕವಾಗಿ ಬಿದ್ದಿದೆ ಎನ್ನಲಾಗುತ್ತಿದೆ. ವಿವಿಧ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು ಎಂದು ಮ.ಬೆಟ್ಟ ಠಾಣೆ ಇನ್‌ಸ್ಪೆಕ್ಟರ್ ಜಗದೀಶ್ ತಿಳಿಸಿದ್ದಾರೆ.





