ಚಾಮರಾಜನಗರ: ಕೇರಳ ಹಾಗೂ ಕೊಡಗು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕಪಿಲಾ ಹಾಗೂ ಕಾವೇರಿ ನದಿಗಳು ತುಂಬಿ ಹರಿಯುತ್ತಿದ್ದು, ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಿಂದ ಭಾರೀ ಪ್ರಮಾಣದ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಭಾಗದ ಕೆಲ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ.
ಜನರನ್ನು ತನ್ನತ್ತ ಆಕರ್ಷಿಸುತ್ತಿದ್ದ ಭರಚುಕ್ಕಿ ಜಲಪಾತ ಸೇರಿದಂತೆ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಸಮೀಪದ ವೆಸ್ಲಿ ಸೇತುವೆ, ಶಿವನಸಮುದ್ರ ಮತ್ತು ಹೊಗೇನಕ್ಕಲ್ ಜಲಪಾತಗಳಿಗೆ ಇಂದಿನಿಂದ ( ಜುಲೈ 31 ) ಆಗಸ್ಟ್ 2ರವರೆಗೆ ನಿರ್ಬಂಧ ಹೇರಿ ಚಾಮರಾಜನಗರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಸದ್ಯ ಕಬಿನಿ ಜಲಾಶಯದಿಂದ 80,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಕೆಆರ್‌ಎಸ್‌ನಿಂದ 1,50,000 ನೀರನ್ನು ಬಿಡಲಾಗಿದೆ. ಕೊಡಗು ಹಾಗೂ ಕೇರಳದಲ್ಲಿ ಮಳೆ ಪ್ರಮಾಣ ಹಚ್ಚುತ್ತಿದ್ದು, ಇನ್ನೂ ಹೆಚ್ಚು ನೀರು ಕಾವೇರಿ ಹಾಗೂ ಕಬಿನಿಗೆ ಹರಿದು ಬರುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ.