ಹನೂರು : ತನ್ನ ಪತ್ನಿಯ ಜೊತೆ ತಂದೆಯೇ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಶಂಕಿಸಿ, ಕಲ್ಲಿನಿಂದ ತಂದೆಯ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಂದನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದನಪಾಳ್ಯ ಗ್ರಾಮದ ಪಾಕಿಯನಾಥನ್ (೫೫) ಕೊಲೆಯಾದ ವ್ಯಕ್ತಿ. ಸಂದನಪಾಳ್ಯ ಗ್ರಾಮದ ಜಾನ್ಸನ್ ಜೀವ ಕೊಲೆ ಮಾಡಿದ ವ್ಯಕ್ತಿ. ಈತ ಗಾಯತ್ರಿ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ, ಈಕೆಯ ಜೊತೆ ತನ್ನ ತಂದೆಯೇ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ಆಗಾಗ್ಗೆ ಗಲಾಟೆಗಳು ನಡೆಯುತ್ತಿದ್ದವು.
ಇದೇ ವಿಚಾರವಾಗಿ ಸೆ.೨೧ರ ರಾತ್ರಿ ೮ ಗಂಟೆಯ ವೇಳೆ ತಂದೆಯ ಜೊತೆ ಗಲಾಟೆ ಮಾಡುತ್ತಿದ್ದಾಗ ಜಗಳ ಅತಿರೇಕಕ್ಕೆ ತಿರುಗಿ ಸಮೀಪದಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ತಲೆಗೆ ಹೊಡೆದ ಹಿನ್ನೆಲೆಯಲ್ಲಿ ಅಧಿಕ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಈ ಸಂಬಂಧ ಮೃತ ಪಾಕಿಯನಾಥನ್‌ರವರ ಸಹೋದರ ಮೊದಲೈಸ್ವಾಮಿ ಜಾನ್ಸನ್ ಜೀವ ವಿರುದ್ಧ ರಾಮಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಎಸ್‌ಪಿ ಭೇಟಿ: ಸಂದನ ಪಾಳ್ಯ ಗ್ರಾಮದಲ್ಲಿ ತಂದೆಯನ್ನೇ ಮಗ ಕೊಲೆ ಮಾಡಿರುವ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಡಿವೈಎಸ್ಪಿ ಲಕ್ಷ್ಮಯ್ಯ, ಇನ್‌ಸ್ಪೆಕ್ಟರ್ ಚಿಕ್ಕರಾಜ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆರೋಪಿ ಬಂಧನ: ತಂದೆಯನ್ನೇ ಕೊಲೆ ಮಾಡಿ ನಾಪತ್ತೆಯಾಗಿದ್ದ ಆರೋಪಿ ಜಾನ್ಸನ್ ಜೀವನನ್ನು ರಾಮಾಪುರ ಠಾಣೆ ಇನ್‌ಸ್ಪೆಕ್ಟರ್ ಚಿಕ್ಕರಾಜ ಶೆಟ್ಟಿ ನೇತೃತ್ವದಲ್ಲಿ ಸಿಬ್ಬಂದಿ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.





