Mysore
27
scattered clouds

Social Media

ಬುಧವಾರ, 21 ಜನವರಿ 2026
Light
Dark

ಸುಳ್ವಾಡಿ ವಿಷ ಪ್ರಸಾದ ಪ್ರಕರಣ : ಆರೋಪಿ ಮಹದೇವಸ್ವಾಮಿ ಜಾಮೀನು ರದ್ದು ಆಗ್ರಹಿಸಿ ಪ್ರತಿಭಟನೆ

ಹನೂರು : ತಾಲೂಕಿನ ಸುಳ್ವಾಡಿ ಕಿಚ್ ಗುತ್ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ದುರಂತಕ್ಕೆ ಪ್ರಮುಖ ಆರೋಪಿಯಾಗಿರುವ ಇಮ್ಮಡಿ ಮಹದೇವಸ್ವಾಮಿಗೆ ನೀಡಿರುವ ಜಾಮೀನು ರದ್ದು ಪಡಿಸುವಂತೆ ಆಗ್ರಹಿಸಿ ವಿಷ ಪ್ರಸಾದ ಸಂತ್ರಸ್ತರು ಹಾಗೂ ಕುಟುಂಬಸ್ಥರು ಮಲೆ ಮಹದೇಶ್ವರ ಬೆಟ್ಟದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ಮಲೆ ಮಹದೇಶ್ವರ ಬೆಟ್ಟದ ರಾಜ ಗೋಪುರ ಮುಂಭಾಗ ಜಮಾವಣಿಗೊಂಡ ಸುಳ್ವಾಡಿ ವಿಷ ಪ್ರಸಾದ ಭಾಧಿತರು ಹಾಗೂ ಸಂತ್ರಸ್ತ ಕುಟುಂಬಸ್ಥರು ವಿಷ ಪ್ರಸಾದ ಸೇವನೆಯಿಂದ ಮೃತಪಟ್ಟಿದ್ದ 17 ಜನರ ಭಾವಚಿತ್ರದ ಫ್ಲೆಕ್ಸ್ ಹಿಡಿದು ಆರೋಪಿಗಳ ವಿರುದ್ಧ ಧಿಕ್ಕಾರ ಕೂಗಿ ಸಾಲೂರು ಬ್ರಹನ್ ಮಠದವರೆಗೆ ತೆರಳಿ ಇಮ್ಮಡಿ ಮಹದೇವಸ್ವಾಮಿಯ ವಿರುದ್ಧ ಆಕ್ರೋಶ ಹೊರಹಾಕಿ ನಂತರ ಪೊಲೀಸ್ ಠಾಣೆಗೆ ತೆರಳಿ ಒಂದು ವರ್ಷಗಳವರೆಗೆ ನೀಡಿರುವ ಜಾಮೀನು ರದ್ದು ಮಾಡುವಂತೆ ಆಗ್ರಹಿಸಿ ಪೊಲೀಸರ ಮುಖಾಂತರ ಮನವಿ ಸಲ್ಲಿಸಿದರು.

ಸಂತ್ರಸ್ಥರ ಪರ ಹೋರಾಟಗಾರ ಪಿಜಿ ಮಣಿ ಮಾತನಾಡಿ ಸುಳ್ವಾಡಿ ಕಿಚ್ ಗುತ್ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿ 17 ಜನರ ಸಾವಿಗೆ ಕಾರಣನಾದ ಇಮ್ಮಡಿ ಮಹಾದೇವಸ್ವಾಮಿಗೆ ಜಾಮೀನು ಮಂಜೂರಾಗಿರುವುದು ಖಂಡನೀಯವಾಗಿದೆ. ಈ ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಜಾಮೀನು ರದ್ದು ಮಾಡಿಸಬೇಕು, ಸಾಲೂರು ಬೃಹನ್ ಮಠದ ವತಿಯಿಂದ ಸಂತ್ರಸ್ತರಿಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ ಎಂದು ಆಕ್ರೋಶ‌ ಹೊರ ಹಾಕಿದರು. ಇನ್ನು ಜಾಮೀನು ಪಡೆದು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ತಾಲೂಕು ಬೃಹನ್ ಮಠ ಹಾಗೂ ದೇವಸ್ಥಾನದ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ನಾವೆಲ್ಲರೂ ಸಾಮೂಹಿಕವಾಗಿ ವಿಷ ತೆಗೆದುಕೊಂಡು ಸಾಲೂರು ಮಠ ಹಾಗೂ ದೇವಸ್ಥಾನದ ಮುಂಭಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಇದನ್ನು ಓದಿ: ಗುಂಡಾಲ್‌ ಡ್ಯಾಂನಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪತ್ತೆ

ನಂತರ ಮಾತನಾಡಿದ ಸಂತ್ರಸ್ತರು ಕಿಚ್ ಗುತ್ ಮಾರಮ್ಮನ ದೇವಾಲಯದ ಗೋಪುರ ನಿರ್ಮಾಣದ ಪೂಜಾ ಕಾರ್ಯಕ್ರಮದಲ್ಲಿ ಇಲ್ಲಿನ ಇಮ್ಮಡಿ ಮಹದೇವಸ್ವಾಮಿ ಅಧಿಕಾರದ ದಾಹದಿಂದ ಪ್ರಸಾದಕ್ಕೆ ವಿಷ ಹಾಕಿ ಪೂಜೆಗೆ ಬಂದಿದ್ದ ಅನೇಕ ಭಕ್ತರಲ್ಲಿ ಸುಮಾರು 17 ಜನ ಮೃತರಾದರು. ಜೊತೆಗೆ 150 ಕ್ಕೂ ಹೆಚ್ಚು ಜನರು ಇನ್ನೂ ಕೂಡ ಚಿಕಿತ್ಸೆ ಪಡೆದುಕೊಳ್ಳುತ್ತಲೇ ಇದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ದುರಂತದ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಜಾಮೀನು ನೀಡಿರುವುದರಿಂದ ಬಾದಿತರಿಗೆ ಸೂಕ್ತ ನ್ಯಾಯ ಸಿಗದೆ ತೊಂದರೆಯಾಗಲಿದೆ. ಹಾಗಾಗಿ ಅವರ ಜಾಮೀನನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಸುಳ್ವಾಡಿ ವಿಷ ಪ್ರಸಾದ ದುರಂತದಲ್ಲಿ ಮೃತ ಪಟ್ಟ ಕುಟುಂಬಸ್ಥರಿಗೆ ಅಂದಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ರವರು ಘೋಷಣೆ ಮಾಡಿದಂತೆಯೇ ಸೇರಬೇಕಾದ ಸರ್ಕಾರಿ ಸೌಲಭ್ಯಗಳು ಇನ್ನೂ ಕೂಡ ದೊರಕಿಲ್ಲ. ಫಲಾನುಭವಿಗೆ ಜಮೀನು ಮಂಜೂರು ಆಗಿಲ್ಲ, ನಿವೇಶನ ಸಿಕ್ಕಿಲ್ಲ.

ಇದರಿಂದ ಮೃತ ಕುಟುಂಬ ಈಗಾಗಲೇ ಸಾಕಷ್ಟು ತೊಂದರೆಗೆ ಸಿಲುಕಿದೆ. ಈ ನಡುವೆ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಜಾಮೀನು ಸಿಕ್ಕಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸುಳ್ವಾಡಿ ವಿಷ ದುರಂತದಲ್ಲಿ ಮೊದಲನೇ ಆರೋಪಿಗೆ ಜಾಮೀನು ಸಿಕ್ಕಿರುವುದು ಸಂತ್ರಸ್ತರ ಕುಟುಂಬಗಳ ಸದಸ್ಯರುಗಳಿಗೆ ಆತಂಕ ಉಂಟು ಮಾಡಿದೆ. ಜೊತೆಗೆ ಇವರ ಪ್ರಭಾವದಿಂದ ಸಾಕ್ಷ್ಯ ನಾಶವಾಗುವ ಭೀತಿ ಎದುರಾಗಿದೆ. ಹಾಗಾಗಿ ಸಂತ್ರಸ್ತರ ಕುಟುಂಬಸ್ಥರು ಕಳೆದ ನಾಲ್ಕು ದಿನಗಳಿಂದ ಕಿಚ್ಚ್ ಗುತ್ ಮಾರಮ್ಮ ದೇವಸ್ಥಾನ, ಎಂ.ಜಿ ದೊಡ್ಡಿ, ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿದ್ದರು.

ಈಗಾಗಲೇ ವಿಷ ಪ್ರಸಾದದ ಸಂತ್ರಸ್ತರು ಹನೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಂ ಆರ್ ಮಂಜುನಾಥ್ , ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ ಬಿ ಟಿ ಕವಿತಾ, ಹಾಗೂ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಸೇರಿದಂತೆ ಎಲ್ಲರಿಗೂ ಸಹ ಜಾಮೀನು ರದ್ದು ಗೊಳಿಸಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ. ಇದೆ ವೇಳೆ ಪೆದ್ದನಪಾಳ್ಯ ಮಣಿ,ಷಣ್ಮುಖ, ಶಿವರಾಜ್ ಕುಮಾರ್, ರಾಜಮ್ಮ ಸೇರಿದಂತೆ ವಿಷ ಪ್ರಸಾದ ಸಂತ್ರಸ್ತ ನೂರಾರು ಕುಟುಂಬಸ್ಥರು ಪಾಲ್ಗೊಂಡಿದ್ದರು.

Tags:
error: Content is protected !!