ಚಾಮರಾಜನಗರ: ರಾಜ್ಯದಲ್ಲಿ ನಡೆಯುತ್ತಿರುವ ಹಗರಣಗಳಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ ಎಂದು ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮೊದಲೆಲ್ಲಾ ವಿಭಿನ್ನವಾಗಿ ಗುರುತಿಸಿಕೊಂಡಿದ್ದರು. ಮೊದಲೆಲ್ಲಾ ಅವರ ಅವಧಿಯಲ್ಲಿ ಈ ರೀತಿ ಆರೋಪಗಳು ಬಂದಿರಲಿಲ್ಲ.
ಈಗ ಅವರ ಸ್ಥಿತಿ ಹೇಗಿದೆ ಎಂದರೆ ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬಂತಾಗಿದ್ದು, ಎಲ್ಲಾ ಹಗರಣಗಳಿಂದ ಅವರಿಗೆ ಭಾರೀ ಮುಜುಗರ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಅವರ ಮೇಲೆ ಬಂದಿರುವ ಆರೋಪಗಳಿಗೆಲ್ಲಾ ಸಿಬಿಐ ತನಿಖೆ ಮಾಡಲೇಬೇಕು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವ್ಯವಸ್ಥೆಯನ್ನು ಪಾರದರ್ಶಕ ಮಾಡಿದೆ. ಆದ್ದರಿಂದ ಮುಡಾ ಹಗರಣದ ಬಗ್ಗೆ ಸಿಬಿಐ ತನಿಖೆಯಾಗಲೇಬೇಕು ಎಂದು ಆಗ್ರಹಿಸಿದರು.