ಕೊಳ್ಳೇಗಾಲ : ಅಗರ ಮಾಂಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಮುಡಿಗುಂಡ ಸೇತುವೆಯ ಬಳಿ ಅಕ್ರಮವಾಗಿ ಒಣಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, 280 ಗ್ರಾಮ್ ಒಣಗಾಂಜಾವನ್ನು ಭಾನುವಾರ ಜಪ್ತಿ ಮಾಡಿದ್ದಾರೆ. ಬಾಗಳಿ ಗ್ರಾಮದ ಕರಿಯಪ್ಪ ಎನ್ನುವರ ಮಗನಾದ ನಿಂಗರಾಜು ಬಂಧಿತ ಆರೋಪಿ. ಈತ ಸಾರ್ವಜನಿಕರಿಗೆ ಒಣಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಎಸ್ಐ ಕರಿಬಸಪ್ಪ ಹಾಗೂ ಡಿವೈಎಸ್ಪಿ ಅಪರಾಧ ಪತ್ತೆದಳದ ಸಿಬ್ಬಂದಿಗಳು ದಾಳಿ ನಡೆಸಿ ಒಣಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನು ಓದಿ : ಗಾಂಜಾ ಮಾರಾಟಕ್ಕೆ ಯತ್ನ : ಇಬ್ಬರ ಬಂಧನ
ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಬಂಧಿತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ದಾಳಿಯಲ್ಲಿ ಡಿವೈಎಸ್ಪಿ ಅಪರಾಧ ಪತ್ತೆದಳದ ಎಎಸ್ಐ ತಖೀಉಲ್ಲಾ, ಹೆಚ್.ಸಿ.ಗಳಾದ ರವಿಕುಮಾರ್, ಬಿಳಿಗೌಡ, ವೆಂಕಟೇಶ್, ಕಾನ್ಸಟೇಬಲ್ ಶಿವಕುಮಾರ್, ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಹೆಚ್.ಸಿ ಪರಶಿವಮೂರ್ತಿ, ಕಾನ್ಸಟೇಬಲ್ ಶಿವಕುಮಾರ್, ಶ್ರೀಶೈಲ, ದರ್ಶನ, ಚಾಲಕ ಮಲ್ಲೇಶ್ ಇದ್ದರು





