ಹನೂರು : ಸೋಮವಾರ ಸುರಿದ ಮಳೆಯಿಂದ ಬಂಡಳ್ಳಿ ಗ್ರಾಮದ ಸರ್ಕಾರಿ ಶಾಲೆ ಕಟ್ಟಡದ ಗೋಡೆಯೊಂದು ಕುಸಿದಿರುವ ಘಟನೆ ನಡೆದಿದೆ.
ಹನೂರು ಶೈಕ್ಷಣಿಕ ವಲಯದ ಬಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿರುವ ಶಾಲೆಯ ಕಟ್ಟಡದ ಗೋಡೆ ಕುಸಿದು ಬಿದ್ದಿದ್ದು, ಯಾವುದೇ ಅವಘಡ ಸಂಭವಿಸಿಲ್ಲ.
ಹಳೆಯ ಕಟ್ಟಡದ ಗೋಡೆ ಕುಸಿತ :
ಬಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿರುವ ೫ ಕೊಠಡಿಗಳು ಇದೇ ಸ್ಥಿತಿಯಲ್ಲಿದೆ. ಶಾಲೆಯಲ್ಲಿ ರಜೆ ಇದ್ದ ಕಾರಣ ಯಾರೂ ಇಲ್ಲದಿದ್ದರಿಂದ ಅಪಾಯ ತಪ್ಪಿದೆ. ಆದ್ದರಿಂದ ಶಾಲೆಯ ಚಾವಣಿ, ಕಟ್ಟಡಗಳು ಕುಸಿಯುವ ಮುನ್ನ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು, ಮಕ್ಕಳ ಪೋಷಕರು ಒತ್ತಾಯಿಸಿದ್ದಾರೆ.
ಇದನ್ನು ಓದಿ : ರಾಜ್ಯದಲ್ಲಿ ಧಾರಾಕಾರ ಮಳೆ: ಮೂರು ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಯಲ್ಲಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸಬೇಕು. ಮುಂದಿನ ದಿನಗಳಲ್ಲಿ ಮಕ್ಕಳು ಹಳೆಯ ಕಟ್ಟಡದ ಬಳಿ ಹೋಗದಂತೆ ಇಲ್ಲಿನ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಎಚ್ಚರಿಕೆ ವಹಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕ ಗುರುಸ್ವಾಮಿ ಮಾತನಾಡಿ, ಬಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಕಟ್ಟಡವು ಶಿಥಿಲಗೊಂಡಿರುವುದರಿಂದ ಕುಸಿದು ಬಿದ್ದಿದೆ. ರಜಾ ಅವಧಿ ಆಗಿದ್ದರಿಂದ ಯಾವುದೇ ಅವಘಡಗಳು ಸಂಭವಿಸಿಲ್ಲ. ಈ ಶಾಲೆಯಲ್ಲಿ ಐದು ಕಟ್ಟಡಗಳು ತುಂಬಾ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿದ್ದು ಯಾವ ಕ್ಷಣದಲ್ಲಿಯಾದರೂ ಬೀಳುವ ಹಂತದಲ್ಲಿದೆ. ಹಿರಿಯ ಅಧಿಕಾರಿಗಳು ಸೂಕ್ತ ಗಮನ ಹರಿಸಿ ಕಟ್ಟಡ ತೆರವು ಮಾಡಬೇಕು ಎಂದು ಒತ್ತಾಯಿಸಿದರು.





