ಹನೂರು: ತಮಿಳುನಾಡು, ಕರ್ನಾಟಕ ರಾಜ್ಯಗಳ ಅಧಿಕಾರಿಗಳ ಸಂಧಾನದಿಂದ ಕರ್ನಾಟಕ ಭಾಗದಲ್ಲಿ ಮತ್ತೆ ತೆಪ್ಪ ನಡೆಸಲು ತೆಪ್ಪ ಓಡಿಸುವವರು ಸಮ್ಮತಿಸಿದ್ದು, ವಿವಾದಕ್ಕೆ ತೆರೆ ಎಳೆದಂತಾಗಿದೆ.
ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರನ್ನು ಸೋಮವಾರ ಕರೆದುಕೊಂಡು ಹೋಗಿದ್ದಾಗ ತಮಿಳುನಾಡು ಪೊಲೀಸರು ತೆಪ್ಪ ಓಡಿಸುವವರಿಂದ ಮೊಬೈಲ್ ಹಾಗೂ ವುಟ್ಟು ಕಿತ್ತುಕೊಂಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ತೆಪ್ಪ ಒಡಿಸುವವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಸೋಮವಾರ ಮಧ್ಯಾಹದಿಂದಲೇ ತೆಪ್ಪ ಸಂಚಾರ ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದರಿಂದ ಎಚ್ಚೆತ್ತ ಅಧಿಕಾರಿಗಳು ಮಂಗಳವಾರ ತಮಿಳುನಾಡು ಡಿವೈಎಸ್‌ಪಿ ಜುಂಸುಂದರ್, ಇನ್‌ಸ್ಪೆಕ್ಟರ್ ಮುರಳಿ, ಗೋಪಿನಾಥಂ, ಡಿಆರ್‌ಎಫ್ ದಿನೇಶ್, ಮಲೆ ಮಹದೇಶ್ವರ ಬೆಟ್ಟದ ಮುಖ್ಯಪೇದೆ ಮುರುಗೇಶ್ ಹಾಗೂ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಸಭೆ ನಡೆಸಿ ರಾಜಿ ಮಾಡಲಾಗಿದೆ.
ಸಭೆಯಲ್ಲಿ ತಮಿಳುನಾಡಿನ ಡಿವೈಎಸ್ಪಿ ಜೈಸುಂದರ್ ಮಾತನಾಡಿ, ಹೊಗೇನಕಲ್ ಜಲಪಾತ ವೀಕ್ಷಿಸಲು ಬರುವ ವೇಳೆಯಲ್ಲಿ ಪ್ರವಾಸಿಗರು ಜಲಪಾತದ ಬಳಿ ಸೆಲ್ಛಿ ತೆಗೆದುಕೊಳ್ಳಲು ಹೋಗುವ ವೇಳೆ ಜಾರಿ ಜಲಪಾತಕ್ಕೆ ಬಿದ್ದು ಅನಾಹುತ ಸಂಭವಿಸಬಹುದು ಎಂಬ ಕಾರಣಕ್ಕೆ ತಮಿಳುನಾಡಿನ ಭಾಗದಲ್ಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪ್ರವಾಸಿಗರನ್ನು ಕರೆದುಕೊಂಡು ಮತ್ತೆ ಸುರಕ್ಷಿತವಾಗಿ ಕರೆತಂದು ಬಿಡುವುದು ತೆಪ್ಪ ನಡೆಸುವವರ ಜವಾಬ್ದಾರಿಯಾಗಿದೆ. ಮುಂದೆ ಇಂತಹ ಘಟನೆಗಳಿಗೆ ಅವಕಾಶ ಮಾಡಿಕೊಡದೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ ನಂತರ ಮತ್ತೆ ತೆಪ್ಪ ಸಂಚಾರ ಪ್ರಾರಂಭವಾಗಿದೆ.