ಹನೂರು : ಮಲೆ ಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿಯಲ್ಲಿ ಹುಲಿ ಹತ್ಯೆ ಪ್ರಕರಣದ ಸಂಬಂಧ ಕುಟುಂಬಸ್ಥರೇ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದ ನಾಲ್ಕನೇ ಆರೋಪಿಗೆ ಹೆಚ್ಚಿನ ವಿಚಾರಣೆಗೆ ಒಂದು ದಿನಗಳ ಕಾಲ (ಶುಕ್ರವಾರ ಸಂಜೆಯವರೆಗೆ) ಅರಣ್ಯ ಇಲಾಖೆ ಕಸ್ಟಡಿಗೆ ನೀಡಿದ್ದಾರೆ.
ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪಚ್ಚೆದೊಡ್ಡಿ ಹುಲಿ ಹತ್ಯೆಗೆ ಸಂಬಂಧಪಟ್ಟಂತೆ ಸಿದ್ದು ಎಂಬ ಆರೋಪಿ ಭಾಗಿಯಾಗಿದ್ದು ನಾಪತ್ತೆಯಾಗಿದ್ದ ಈತನ ಕುಟುಂಬಸ್ಥರೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬುಧವಾರ ಒಪ್ಪಿಸಿದ್ದರು. 24 ಗಂಟೆಗಳ ಕಾಲ ಸತತ ವಿಚಾರಣೆ ನಡೆಸಿ ನಂತರ ಹನೂರು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ನೀಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದ ಹಿನ್ನೆಲೆ ನ್ಯಾಯಾಧೀಶರಾದ ಕಾವ್ಯಶ್ರೀರವರು ಒಂದು ದಿನಗಳ ಕಾಲ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.
ಇದನ್ನೂ ಓದಿ:-2005 ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು : ಸಿಎಂ ಸಿದ್ದರಾಮಯ್ಯ
ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಪಚ್ಚಮಲ್ಲ, ಗಣೇಶ ,ಸಂಪು ರವರನ್ನು ಬಂಧಿಸಿ ಅಕ್ಟೋಬರ್ ೬ ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗೆ ನೀಡುವಂತೆ ನ್ಯಾಯಾಧೀಶರನ್ನು ಮನವಿ ಮಾಡಿಕೊಂಡಿದ್ದ ಹಿನ್ನೆಲೆ ಐದು ದಿನಗಳ ಕಾಲ ಕಸ್ಟಡಿಗೆ ನೀಡಿದ್ದರು. ಅಕ್ಟೋಬರ್ 10ರ ಮಧ್ಯಾಹ್ನ 3 ಗಂಟೆಗೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶ ನೀಡಿದ್ದರು. ಈ ಹಿನ್ನೆಲೆ ಕಳೆದ ಐದು ದಿನಗಳಿಂದ ಹುಲಿ ಸಾವಿಗೆ ಯಾವ ರೀತಿ ಸಂಚು ರೂಪಿಸಿದ್ದಾರೆ, ಯಾರೆಲ್ಲ ಭಾಗಿಯಾಗಿದ್ದಾರೆ, ಯಾವ ರೀತಿ ಹುಲಿಕೊಂದು ಅದನ್ನು ಮೂರು ಪಾಲು ಮಾಡಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ವಿಚಾರಣೆಯ ವೇಳೆ ಆರೋಪಿಗಳು ಭಾಗಿಯಾಗಿರುವ ಎಲ್ಲರ ಹೆಸರನ್ನು ತಿಳಿಸಿದ್ದು ಹುಲಿಕೊಲ್ಲಲು ನಿಖರ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ವಿಚಾರಣೆ ಮುಗಿದಿರುವುದರಿಂದ ಶುಕ್ರವಾರ ಮಧ್ಯಾಹ್ನ ಕೊಳ್ಳೇಗಾಲ ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದ ಪ್ರಮುಖ ಆರೋಪಿ ಹಸುವಿನ ಮಾಲೀಕ ಚಂದ್ರು ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದು ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಈತನ ಬಗ್ಗೆ ಮಾಹಿತಿ ಸಂಗ್ರಹಿಸಿ ಪತ್ತೆ ಹಚ್ಚಿ ಬಂಧಿಸಲು ಕ್ರಮ ಕೈಗೊಂಡಿರುವಾಗಿ ಅರಣ್ಯ ಇಲಾಖೆಯ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.





