ಹನೂರು: ಜಮೀನುಗಳಲ್ಲಿ ಮೇವಿನ ನಡುವೆ ನಾಡ ಬಾಂಬ್ ಇಟ್ಟು ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಪ್ರಕರಣ ಕೆಲವು ದಿನಗಳ ಮಟ್ಟಿಗೆ ತಣ್ಣಗಾಗಿತ್ತು. ಇದೀಗ ಮತ್ತೆ ಸದ್ದು ಮಾಡುತ್ತಿದ್ದು, ನಾಡ ಬಾಂಬ್ ಸ್ಫೋಟಕ್ಕೆ ಒಂದು ಹಸುವಿನ ಮುಖ ಛಿದ್ರವಾಗಿರುವ ಘಟನೆ ಹನೂರು ತಾಲ್ಲೂಕು ವ್ಯಾಪ್ತಿಯ ಟಿಬೆಟಿಯನ್ ಕ್ಯಾಂಪ್ ಸಮೀಪ ಜರುಗಿದೆ.
ಹನೂರು ತಾಲ್ಲೂಕಿನ ಬೂದಬಾಳು, ಹನೂರು ಪಟ್ಟಣ, ಆರ್.ಎಸ್ ದೊಡ್ಡಿ, ಕುರಟ್ಟಿ ಹೊಸೂರು, ಕೌದಳ್ಳಿ ಗ್ರಾಮದ ಎರಡು ಕಡೆ ನಾಡ ಬಾಂಬ್ ಇಟ್ಟು ಸುಮಾರು ಹತ್ತಕ್ಕೂ ಹೆಚ್ಚು ಹಸುಗಳ ಮುಖ ಛಿದ್ರವಾಗಿತ್ತು.
ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ನಾಡ ಬಾಂಬ್ ಇಡುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದಾದ ನಂತರ ಸುಮಾರು ಮೂರು ತಿಂಗಳುಗಳ ಕಾಲ ಯಾವುದೇ ಸಿಡಿಮದ್ದು ಪ್ರಕರಣಗಳು ಪತ್ತೆಯಾಗಿರಲಿಲ್ಲ.
ಇದೀಗ ವಿ.ಎಸ್.ದೊಡ್ಡಿ ಗ್ರಾಮದ ಮಂಟೇಸ್ವಾಮಿ ಎಂಬುವವರಿಗೆ ಸೇರಿದ ಹಸುಗಳು ಟಿಬೆಟಿಯನ್ ಕ್ಯಾಂಪ್ ಸಮೀಪದ ಎನ್.ವಿಲೇಜ್ ಗ್ರಾಮದ ಖಾಲಿ ನಿವೇಶನದಲ್ಲಿ ಮೇವು ಮೇಯುತ್ತಿದ್ದವು. ಈ ವೇಳೆ ಒಂದು ಹಸು ಕಿಡಿಗೇಡಿಗಳು ಇಟ್ಟಿದ್ದ ನಾಡ ಬಾಂಬ್ ಜಿಗಿದ ಪರಿಣಾಮ ಅದರ ಮುಖ ಛಿದ್ರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಡಬಾಂಬ್ ಇಟ್ಟಿದ್ದ ಕಿಡಿಗೇಡಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.




