ಹನೂರು: ಹಣ ಡಬ್ಲಿಂಗ್ ಮಾಡಲು ತಮಿಳುನಾಡಿನ ಕಡೆ ಬಿಳಿ ಬಣ್ಣದ ಕಾರಿನಲ್ಲಿ ವಂಚನೆ ಮಾಡುವ ನೋಟು ಹಾಗೂ ಹಣ ಎಣಿಕೆ ಮಾಡುವ ಯಂತ್ರ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹನೂರು ತಾಲೂಕಿನ ದಂಟಳ್ಳಿ ಗ್ರಾಮದ ಶೇಖರ್, ಚಾಮರಾಜನಗರ ತಾಲ್ಲೂಕಿನ ಸಂತೆಮರಳ್ಳಿ ಗ್ರಾಮದ ಮಾದೇಶ್, ಸುಖೇಶ್ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆ ವಿವರ: ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಇಂದು ಸಂಜೆ ಆನೆ ತಲೆ ದಿಂಬದ ಬಳಿ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದಾಗ, ಪೊಲೀಸರ ವಾಹನ ಕಂಡು ಗ್ರಾಂಡ್ ವಿಟ್ರಾ ಕಾರಿನ ಚಾಲಕ ಕಾರು ನಿಲ್ಲಿಸಿ ಪರಾರಿಯಾಗಿದ್ದಾನೆ. ಅನುಮಾನಗೊಂಡ ಪೊಲೀಸರು ಕಾರು ಸುತ್ತುವರಿದು ಕಾರಿನಲ್ಲಿದ್ದ ಆರೋಪಿ ಶೇಖರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಿಶೀಲನೆ ವೇಳೆ ಕಾರಿನ ಒಳಗೆ ಒಂದು ಬ್ಯಾಗಿನಲ್ಲಿ 500 ನೋಟುಗಳಿಗೆ ಹೋಲುವ ಕಪ್ಪು ಬಣ್ಣದ 370 ಬಂಡಲ್ ಪೇಪರ್ ಕಟ್ಟುಗಳಿದ್ದು, ಒಂದು ಬಂಡಲ್ ನಲ್ಲಿ 100 ಹಾಳೆಗಳು, ಎರಡು ಖಾಲಿ ಬ್ಯಾಗ್, ನೋಟುಗಳು ಎಣಿಸುವ ಮಿಷನ್ ಪತ್ತೆಯಾಗಿದೆ. ಬಂಧಿತ ಆರೋಪಿಯಿಂದ 500 ರೂ ಬೆಲೆಯ 1,11,500 ರೂಪಾಯಿ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಜಗದೀಶ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ನಾಪತ್ತೆಯಾಗಿರುವ ಇಬ್ಬರು ಆರೋಪಿಗಳನ್ನು ಬಂಧಿಸಲು ಈಗಾಗಲೇ ತಂಡ ರಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.