ಯಳಂದೂರು: ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ 4 ತಾಸು ಒದ್ದಾಟ ನಡೆಸಿದ ಘಟನೆ ಯಳಂದೂರು ತಾಲ್ಲೂಕಿನ ಗಂಗವಾಡಿಯಲ್ಲಿ ನಡೆದಿದೆ.
ಗಂಗವಾಡಿ ಗ್ರಾಮದ ಕಿಟ್ಟಿ ಎಂಬಾತನೇ ಬೋನಿನಲ್ಲಿ ಸಿಲುಕಿದ ವ್ಯಕ್ತಿ. ಗಂಗವಾಡಿ ಗ್ರಾಮದಲ್ಲಿ ಶನಿವಾರ ರಾತ್ರಿ ರಾಮಯ್ಯ ಎಂಬುವರಿಗೆ ಸೇರಿದ ಜಮೀನಿನಲ್ಲಿ ಚಿರತೆ ದಾಳಿ ನಡೆಸಿ ಮೂರು ಜಾನುವಾರುಗಳನ್ನು ಕೊಂದು ಹಾಕಿತ್ತು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗಾಗಿ ಎರಡು ಕಡೆ ಬೋನನ್ನು ಇರಿಸಿದ್ದರು. ಒಂದು ರಾಮಯ್ಯನವರ ಜಮೀನಿನಲ್ಲಿ, ಮತ್ತೊಂದು ರುದ್ರ ಎಂಬುವವರ ಜಮೀನಿನಲ್ಲಿ ಬೋನು ಇರಿಸಿದ್ದರು.
ಇದನ್ನು ಓದಿ: ಮೈಸೂರು: ಬೀದಿನಾಯಿ ಹೊತ್ತೊಯ್ದ ಚಿರತೆ
ಬೋನನ್ನು ನೋಡಲು ತೆರಳಿದ ಕಿಟ್ಟಿ ಇದರ ಒಳ ಹೊಕ್ಕಿದ್ದಾರೆ. ಆಗ ಬೋನಿನ ಬಾಗಿಲು ಮುಚ್ಚಿಕೊಂಡಿದೆ. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಇದನ್ನು ತೆರೆಯಲು ಸಾಧ್ಯವಾಗಿಲ್ಲ. ಇವರ ಬಳಿ ಮೊಬೈಲ್ ಕೂಡ ಇರಲಿಲ್ಲ. ಹಾಗಾಗಿ ಇವರು ಇದರೊಳಗಿಂದಲೇ ಕಾಪಾಡಿ, ಕಾಪಾಡಿ ಎಂದು ಚೀರಾಟ ನಡೆಸಿದ್ದಾರೆ.
ಮಧ್ಯಾಹ್ನದ ವೇಳೆಗೆ ದನಗಾಯಿಗಳು, ರೈತರು ದೂರದಿಂದ ಇವರ ಕಣ್ಣಿಗೆ ಬಿದ್ದಿದ್ದಾರೆ. ಆಗ ಇವರು ಜೋರಾಗಿ ಕಿರುಚಿದ್ದಾರೆ. ಕೆಲವರು ಬೋನಿನ ಬಳಿ ಬಂದು ಕಿಟ್ಟಿ ಬೋನಿಗೆ ಸಿಲುಕಿಕೊಂಡಿರುವುದು ಗೊತ್ತಾಗಿದೆ.
ಬಳಿಕ ಗ್ರಾಮಸ್ಥರು ಬಂದು ಬೋನಿನ ಬಾಗಿಲನ್ನು ತೆರೆದು ಕಿಟ್ಟಿಯನ್ನು ಸುರಕ್ಷಿತವಾಗಿ ಹೊರಕ್ಕೆ ತಂದಿದ್ದಾರೆ.





