ಯಳಂದೂರು: ತಾಲ್ಲೂಕಿನ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಕರಡಿ ದಾಳಿ ನಡೆಸಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಬಿಳಿಗಿರಿರಂಗನ ಬೆಟ್ಟದ ಸೀಗೆಬೆಟ್ಟ ಪೋಡಿನ ನಿವಾಸಿ ಸಿದ್ದೇಗೌಡ (30) ಮೃತಪಟ್ಟ ವ್ಯಕ್ತಿ. ಇವರು ಸೋಮವಾರ ಮಧ್ಯಾಹ್ನ 2 ಗಂಟೆಗೆ ಬಿಆರ್‌ಟಿ ಅರಣ್ಯ ವ್ಯಾಪ್ತಿಯ ನೇರಿಗೇರಿ ಎಂಬ ಸ್ಥಳದಲ್ಲಿ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಗುಂಪಿನೊಂದಿಗೆ ತೆರಳಿದ್ದರು. ಆ ವೇಳೆ ಕರಡಿ ದಾಳಿ ನಡೆಸಿದೆ. ಇವರೊಂದಿಗೆ ತೆರಳಿದ್ದ ಎಲ್ಲರೂ ಇಲ್ಲಿಂದ ಕಾಲ್ಕಿತ್ತರೆ ಸಿದ್ದೇಗೌಡ ಕರಡಿ ಕೈಯಲ್ಲಿ ಸಿಲುಕಿದ್ದು, ಕರಡಿ ಕಚ್ಚಿ ಗಾಯಗೊಳಿಸಿದ್ದರಿಂದ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
2 ವರ್ಷಗಳ ಹಿಂದೆ ಇವರ ಪತ್ನಿ ಮೃತಪಟ್ಟಿದ್ದು, ಇವರಿಗೆ ಎರಡೂವರೆ ವರ್ಷದ ಹೆಣ್ಣು ಮಗುವಿದೆ. ಈ ಸಂಬಂಧ ಅರಣ್ಯ ಇಲಾಖೆಯವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂಧಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಿದ್ದಾರೆ.





