ಚಾಮರಾಜನಗರ : ತಾಲ್ಲೂಕಿನ ಕೊತ್ತಲವಾಡಿ ಗ್ರಾಮದ ಸಮೀಪವಿರುವ ಕರಿಕಲ್ಲು ಕ್ವಾರಿಯೊಂದರ ಬಳಿ ಚಿರತೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ವಿಷಪ್ರಾಶನ ಶಂಕೆ ವ್ಯಕ್ತವಾಗಿದೆ.
ಮಲೆಮಹದೇಶ್ವರ ವನ್ಯಜೀವಿ ಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ವಿಷಪ್ರಾಷನದಿಂದ 5 ಹುಲಿಗಳು ಮೃತಪಟ್ಟ ಘಟನೆ ಹಸಿರಿರುವಾಗಲೇ ಚಿರತೆ ಸತ್ತಿರುವುದು ಬೆಳಕಿಗೆ ಬಂದಿದೆ.
ಕ್ವಾರಿ ಸಮೀಪದ ಕಲ್ಲಿನ ಮೇಲೆ 5-6 ವರ್ಷ ವಯಸ್ಸಿನ ಗಂಡು ಚಿರತೆಯ ಕಳೇಬರ ಪತ್ತೆಯಾಗಿದ್ದು ಎರಡು ಮೂರು ದಿನಗಳ ಹಿಂದೆ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ. ಚಿರತೆ ಕಳೇಬರ ಪತ್ತೆಯಾಗಿರುವ ಸಮೀಪದಲ್ಲಿಯೇ ಕರು ಹಾಗೂ ನಾಯಿಯ ಕಳೇಬರ ಕೂಡ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಗುರುವಾರ ಸಂಜೆ ಚಿರತೆಯ ಕಳೇಬರವನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಆರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬಂಡಿಪುರದ ಶ್ವಾನದಳದಿಂದ ತಪಾಸಣೆ ನಡೆಸಲಾಯಿತು.
ಪಶು ವೈದ್ಯರಾದ ಡಾ.ವಾಸಿಂ, ಡಾ.ಮೂರ್ತಿ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಚಿರತೆಯ ಕಳೇಬರವನ್ನು ಸುಡಲಾಯಿತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಸ್ಥಳಕ್ಕೆ ಚಾಮರಾಜನಗರ ಅರಣ್ಯ ವೃತ್ತದ ಸಿಸಿಎಫ್ ಹೀರಾಲಾಲ್, ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕ ಶ್ರೀಪತಿ, ಎಸಿಎಫ್ ಮಂಜುನಾಥ್, ಪ್ರಾದೇಶಿಕ ಆರಣ್ಯ ವಲಯದ ಆರ್‌ಎಫ್ ಸಂದೀಪ್, ಡಿಆರ್‌ಎಫ್ ಅಮರನಾಥ್, ಸುರೇಶ್, ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.





