ಹನೂರು : ಮಲೆ ಮಹದೇಶ್ವರ ವನ್ಯಜೀವಿಧಾಮಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣದ ಬಳಿಕ ಚಿರತೆ ಸಾವು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮಲೆಮಹದೇಶ್ವರ ವನ್ಯಜೀವಿಧಾಮದ ಕೌದಳ್ಳಿ ವಲಯದ ತಿಮ್ಮರಾಯನಕೊಂಚಲು ಅರಣ್ಯದಲ್ಲಿ ಜೂ.5 ರಂದು ಚಿರತೆಯ 4 ಕಾಲುಗಳನ್ನು ಬೇಟೆಗಾರರು ಕತ್ತರಿಸಿ ಕದ್ದೊಯ್ದಿದ್ದಾರೆ. ಆದರೆ, ಇದರ ಮರಣೋತ್ತರ ಪರೀಕ್ಷೆಯಲ್ಲಿ ಮಾರ್ಗಸೂಚಿ ಉಲ್ಲಂಘನೆ ಆಗಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಗಂಭೀರ ಆರೋಪ ಮಾಡಿದ್ದಾರೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಧಿಕಾರಿಗೆ ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ಕೊಟ್ಟು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ಜೂನ್ 5 ರಂದು ಕೌದಳ್ಳಿ ಶಾಖೆಯ ಬಿದರಹಳ್ಳಿ ಬೀಟ್ ನಲ್ಲಿ ಚಿರತೆಯ 4 ಕಾಲುಗಳನ್ನು ಬೇಟೆಗಾರರು ಕತ್ತರಿಸಿ ಕದ್ದೊಯ್ದಿದ್ದಾರೆ. NTCA ಮಾರ್ಗಸೂಚಿ ಅನ್ವಯ ಚಿರತೆ ಶವ ಪರೀಕ್ಷೆಯು ಎನ್ ಜಿಒ ಸದಸ್ಯರ ಹಾಜರಿ, ತಜ್ಞರ ಸಮ್ಮುಖದಲ್ಲಿ ನಡೆಯಬೇಕಿತ್ತು. ಆದರೆ, ಇದಾಗಿಲ್ಲ, ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಚಿರತೆ ಸಾವನ್ನು ಮುಚ್ಚಿಡುವ ಯತ್ನ ಮಾಡಿರುವ ಶಂಕೆ ಇದ್ದು ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.





