ಚಾಮರಾಜನಗರ : ಸಮೀಪದ ಹರದನಹಳ್ಳಿ-ಬಂಡಿಗೆರೆ ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಬುಧವಾರ ಚಿರತೆ ಸೆರೆಯಾಗಿದೆ.
ಇದರಿಂದಾಗಿ ಈ ಭಾಗದಲ್ಲಿ ತಲೆದೋರಿದ್ದ ಚಿರತೆ ಉಪಟಳ ತಪ್ಪಿದಂತಾಗಿದೆ. ಹಲವಾರು ದಿನಗಳಿಂದಲೂ ಈ ಕಡೆ ಚಿರತೆ ಕಾಣಿಸಿಕೊಂಡು ಜನರಲ್ಲಿ ಭೀತಿ ಮೂಡಿಸಿತ್ತು. ಜನತೆ ಭಯಭೀತರಾಗಿ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಚಿರತೆ ಸೆರೆಗೆ ಅರಣ್ಯ ಇಲಾಖೆಯವರು ಇತ್ತೀಚೆಗೆ ಬೋನು ಇಟ್ಟಿದ್ದರು. ಬುಧವಾರ ಬೆಳಿಗ್ಗೆ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ವಿಷಯ ತಿಳಿದು ನೂರಾರು ಜನರು ಚಿರತೆಯನ್ನು ನೋಡಲು ಮುಗಿ ಬಿದ್ದಿದ್ದರು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಯಾಗಿದ್ದ ಚಿರತೆಯನ್ನು ಸುರಕ್ಷಿತವಾಗಿ ಕೊಂಡೊಯ್ದು ಕಾಡಿಗೆ ಬಿಟ್ಟಿದ್ದಾರೆ.





