Mysore
22
mist

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಆಕ್ಸಿಜನ್‌ ದುರಂತದ ಎಲ್ಲಾ ಸಂತ್ರಸ್ತರಿಗೂ ಉದ್ಯೋಗ : ಸಿಎಂ ಜೊತೆ ಚರ್ಚಿಸುವುದಾಗಿ ಎಆರ್‌ಕೆ ಭರವಸೆ

ಚಾಮರಾಜನಗರ : ಕೋವಿಡ್ ಸಂದರ್ಭದಲ್ಲಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಎಲ್ಲ ೩೬ ಮಂದಿಯ ಕುಟುಂಬದವರಿಗೂ ಸರ್ಕಾರಿ ಉದ್ಯೋಗ ದೊರೆಯಬೇಕು. ಈ ನಿಟ್ಟಿನಲ್ಲಿ ನಾನು ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸುತ್ತೇನೆ ಎಂದು ಶಾಸಕ ಎ.ಆರ್.ಕೃಷ್ಣಮುರ್ತಿ ತಿಳಿಸಿದರು.

ನಗರದಲ್ಲಿ ಆಕ್ಸಿಜನ್ ಸಂತ್ರಸ್ತರರು, ಎಸ್‌ಡಿಪಿಐ ಮುಖಂಡರಾದ ಅಬ್ರಾರ್ ಅಹಮದ್, ಮಹೇಶ್, ಪಿ.ಸಂಘಸೇನ ಹಾಗೂ ಇತರರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಯುವ ನಾಯಕರಾದ ರಾಹುಲ್ ಗಾಂಧಿ ಅವರ ಒತ್ತಾಸೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವ ಸಂಪುಟದಲ್ಲಿ ವಿಚಾರವನ್ನು ಮಂಡಿಸಿ, ಸರ್ಕಾರಿ ಉದ್ಯೋಗ ನೀಡುವುದಕ್ಕೆ ಒಪ್ಪಿಗೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಭಾರತ್ ಜೋಡೋ ಯಾತ್ರೆಯು ಗುಂಡ್ಲುಪೇಟೆಗೆ ಬಂದಾಗ ರಾಹುಲ್ ಗಾಂಧಿ ಅವರು, ಆಕ್ಸಿಜನ್ ದುರಂತದಲ್ಲಿ ಮೃತರಾದ ೩೬ ಮಂದಿಯ ಸಂತ್ರಸ್ತ ಕುಟುಂಬಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸಂವಾದ ನಡೆಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮೆಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ಭರವಸೆ ಸಿಕ್ಕಿತ್ತು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಈ ಬಗ್ಗೆ ರಾಜ್ಯ ವರಿಷ್ಠರಿಗೆ ಸೂಚನೆ ನೀಡಿ, ಈ ಬೇಡಿಕೆಯನ್ನು ಈಡೇರಿಸಬೇಕೆಂದು ಸೂಚನೆ ನೀಡಿದ ಫಲವಾಗಿ ನಿಮ್ಮೆಲ್ಲರಿಗೂ ಒಳ್ಳೆಯದಾಗಿದೆ. ನಾನು ಜಿಲ್ಲೆಯ ಶಾಸಕನಾಗಿ ನನ್ನ ಕರ್ತವ್ಯ ಮಾಡಿದ್ದೇವೆ. ಆ ಸಂದರ್ಭದಲ್ಲಿ ನಮ್ಮ ಪಕ್ಷವು ನಿಮ್ಮೊಂದಿಗೆ ನಿಂತು ಹೋರಾಟ ಮಾಡಿತ್ತು ಎಂದರು.

ಸರ್ಕಾರಕ್ಕೆ ಆರೋಗ್ಯ ಇಲಾಖೆ ನೀಡಿರುವ ವರದಿಯನ್ವಯ ೨೧ ಮಂದಿಗೆ ಸರ್ಕಾರಿ ಉದ್ಯೋಗ ದೊರೆಯುತ್ತಿದೆ. ಇನ್ನು ಉಳಿದವರಿಗೂ ಸರ್ಕಾರಿ ಕೆಲಸ ಕೊಡಿಸಲು ಪ್ರಯತ್ನ ಮಾಡಲಾಗುವುದು. ಜಿಲ್ಲಾಧಿಕಾರಿ ಶಿಲ್ಪನಾಗ್ ಅವರು ನಿಮ್ಮ ಪರವಾಗಿ ಶ್ರಮಿಸಿದ್ದಾರೆ. ಅವರೊಂದಿಗೆ ನಾನು ಕೂಡ ಸಮಾಲೋಚನೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಒಳ್ಳಯದಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ದುರಂತದ ಸಂತ್ರಸ್ತರಾದ ನಾಗರತ್ನ, ಸಿದ್ದರಾಜಮ್ಮ, ಮರಿಸ್ವಾಮಿ, ಶಿವಣ್ಣ, ನಂದಿನಿ, ಸುಶೀಲಾ, ಸವಿತಾ, ಮುಖಂಡರು ಉಪಸ್ಥಿತರಿದ್ದರು.

Tags:
error: Content is protected !!