ಹನೂರು : ಹೊಗೇನಕಲ್ ಫಾಲ್ಸ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ತೆಪ್ಪ ಓಡಿಸಲು ಬಿಡದೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೊಗೇನಕಲ್ ಫಾಲ್ಸ್ ಅಂಬಿಗರು ಆರೋಪಿಸಿದ್ದಾರೆ.
ಹೊಗೇನಕಲ್ ಫಾಲ್ಸ್‌ನ ಪಳನಿಸ್ವಾಮಿ ಎಂಬವರು ಮಾತನಾಡಿ, ಕಾವೇರಿ, ಕಬಿನಿ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ಸ್‌ಗೂ ಹೆಚ್ಚು ನೀರು ಬಿಟ್ಟಿದ್ದ ಪರಿಣಾಮ ಕಳೆದ ಒಂದು ವಾರದಿಂದ ಹೊಗೇನಕಲ್ ಫಾಲ್ಸ್‌ನಲ್ಲಿ ತೆಪ್ಪ ಓಡಿಸಲು ನಿರ್ಬಂಧ ವಿಧಿಸಲಾಗಿತ್ತು. 3 ದಿನಗಳಿಂದ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ತಮಿಳುನಾಡಿನ ಅಂಬಿಗರಿಗೆ ಅಲ್ಲಿನ ಅರಣ್ಯ ಇಲಾಖೆ ತೆಪ್ಪ ಓಡಿಸಲು ಅವಕಾಶ ನೀಡಿದೆ. ಆದರೆ ಕರ್ನಾಟಕದಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ನಮಗೆ ತೆಪ್ಪ ಓಡಿಸಲು ಬಿಡುತ್ತಿಲ್ಲ. ಕೇಳಿದರೆ ನಮಗೆ ಹಿರಿಯ ಅಧಿಕಾರಿಗಳಿಂದ ಯಾವುದೇ ಅನುಮತಿ ನೀಡಿಲ್ಲ ಎನ್ನುತ್ತಿದ್ದಾರೆ.
ಹೊಗೇನಕಲ್ ಫಾಲ್ಸ್‌ನಲ್ಲಿ 400 ಕ್ಕೂ ಹೆಚ್ಚು ಅಂಬಿಗರಿದ್ದು ತೆಪ್ಪ ಓಡಿಸುವುದನ್ನು ನಂಬಿಕೊಂಡಿದ್ದೇವೆ. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ನಮಗೆ ಜೀವನಕ್ಕೂ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ತೆಪ್ಪ ಒಡಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.





