ಕೊಳ್ಳೇಗಾಲ : ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮಂಜೂರಾಗಿದ್ದ ಬೆಂಗಳೂರು, ಕನಕಪುರ, ಮಳವಳ್ಳಿ, ಕೊಳ್ಳೇಗಾಲ, ಯಳಂದೂರು, ಚಾ.ನಗರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ವರ್ಷವಷ್ಟೇ ಪೂರ್ಣಗೊಂಡಿದ್ದು, ಈಗ ಈ ರಸ್ತೆ ತೀವ್ರ ಕಳಪೆಯಿಂದ ಕೂಡಿದ್ದು, ಉತ್ತಂಬಳ್ಳಿಯಲ್ಲಿ ಮೇಲ್ಸೇತುವೆಯ ತಡೆಗೋಡೆ ಕುಸಿದು ಜನರು ಆತಂಕಗೊಂಡಿದ್ದಾರೆ.
ಈ ವಿಚಾರ ಅರಿತ ಶಾಸಕ ಎ.ಆರ್.ಕೃಷ್ಣಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೂಡಲೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಕ್ವಾಲಿಟಿ ಕಂಟ್ರೋಲ್‌ರವರನ್ನು ಸ್ಥಳಕ್ಕೆ ಕರೆಯಿಸಿ ತಪಾಸಣೆಗೆ ಒಳಪಡಿಸಿ ದುರಸ್ತಿಗೊಳಿಸಬೇಕೆಂದು ಸೂಚಿಸಿದ್ದಾರೆ.
ನಂತರ ಮಾಧ್ಯಮವರ ಜೊತೆ ಮಾತನಾಡಿದ ಅವರು, ಸತ್ತೇಗಾಲ ಸೇತುವೆ ಕಳಪೆಯಿಂದ ಕೂಡಿದ್ದು, ಸೇತುವೆ ಗುಂಡಿ ಬಿದ್ದಿದೆ. ಕೊಳ್ಳೇಗಾಲದ ಇಬ್ಬರು ಈ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಸಂಸದ ಸುನಿಲ್ ಬೋಸ್‌ರವರು ಕೂಡಲೇ ರಾಷ್ಟ್ರೀಯ ಹೆದ್ದಾರಿ ಸಚವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸ್ಥಳಕ್ಕೆ ಕ್ವಾಲಿಟಿ ಕಂಟ್ರೋಲ್‌ರವರನ್ನು ಕರೆಸಿ, ರಸ್ತೆ ಸುರಕ್ಷತೆಯ ಕುರಿತು ಪರೀಕ್ಷಿಸಿ, ೧ ವರ್ಷದಲ್ಲಿ ಗುಂಡಿ ಬಿದ್ದಿರುವ ಸೇತುವೆಯನ್ನು ಹೊಸದಾಗಿ ನಿರ್ಮಿಸಲು ಒತ್ತಾಯಿಸಬೇಕೆಂದು ತಿಳಿಸಿದರು.
ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ದೊಡ್ಡ ಅನಾಹುತ ವಾಗುವ ಸಂಭವ ಇರುವುದರಿಂದ ಸಂಸದರು ಮಂತ್ರಿಗಳ ಗಮನ ಸೆಳೆದು ಸಂಭಾವ್ಯ ಅನಾಹುತವನ್ನು ತಪ್ಪಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಡುವುದರಿಂದ ಕೇಂದ್ರ ಸರ್ಕಾರದವರೇ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಮಾತನಾಡಿ, ಜಿಲ್ಲಾಧಿಕಾರಿಗಳು ಈ ಸಂಬಂಧ ರಸ್ತೆ ಪರಿಶೀಲನೆ ಸಮಿತಿಗೆ ಪತ್ರ ಬರೆದಿದ್ದಾರೆ. ತಾಂತ್ರಿಕ ಸಿಬ್ಬಂದಿ ಆಗಮಿಸಿ ಪರಿಶೀಲಿಸಿ ವರದಿ ಕೊಟ್ಟ ಮೇಲೆ ಸಂಬಂಧಪಟ್ಟ ಗುತ್ತಿಗೆದಾರನ ಮೇಲೆ ದೂರು ಸಲ್ಲಿಸಿ ಎಫ್‌ಐಅರ್ ಹಾಕಿಸುವುದಾಗಿ ತಿಳಿಸಿದ್ದಾರೆ. ತನಿಖಾ ತಂಡ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಮಿಲಿನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಎಚ್.ವಿ.ಚಂದ್ರು, ಡಿವೈಎಸ್ಪಿ ಧರ್ಮೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಇತರರು ಹಾಜರಿದ್ದರು.





