Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ಹನೂರು ಕಳ್ಳತನ ಪ್ರಕರಣ: ಸ್ಥಳಕ್ಕೆ ಶಾಸಕ ಎಂ.ಆರ್.ಮಂಜುನಾಥ್‌ ಭೇಟಿ

ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಳ್ಳತನ, ಅಪಘಾತ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಪಟ್ಟಣದಲ್ಲಿ 11ನೇ ವಾರ್ಡಿನ ನಿವಾಸಿ ಚಿನ್ನದೊರೆ ಎಂಬುವರ ಮನೆಯಲ್ಲಿ ಸೋಮವಾರ ತಡರಾತ್ರಿ ಕಳ್ಳತನವಾಗಿದ್ದ ಹಿನ್ನೆಲೆ ಅವರ ನಿವಾಸಕ್ಕೆ ತೆರಳಿ, ನೊಂದವರಿಗೆ ಧೈರ್ಯ ತುಂಬಿ ಅವರು ಮಾತನಾಡಿದರು.

ಹನೂರು ಪಟ್ಟಣದಲ್ಲಿ ಸೋಮವಾರ ತಡರಾತ್ರಿ ಚಿನ್ನದೊರೆ ಎಂಬುವವರ ಮನೆಯಲ್ಲಿ 20 ಲಕ್ಷ ನಗಲು 308 ಗ್ರಾಂ ಚಿನ್ನ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಮಗಳ ಮದುವೆಗೆ ಸಂಗ್ರಹಿಸಿಟ್ಟಿದ್ದ ನಗದು ಚಿನ್ನ ಕಳುವಾಗಿರುವ ವಿಚಾರ ತುಂಬಾ ಬೇಸರದ ಸಂಗತಿ. ಈಗಾಗಲೇ ಎಸ್ಪಿರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾನು ಸಹ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಿ ಕಳ್ಳತನವಾಗಿರುವ ನಗದು ಹಣವನ್ನು ಕೊಡಿಸುವಂತೆ ತಿಳಿಸಿದ್ದೇನೆ. ಪೊಲೀಸರು ಸಹ ಮಂಗಳವಾರದಿಂದಲೇ ಕಾರ್ಯಚರಣೆ ಪ್ರಾರಂಭ ಮಾಡಿದ್ದು ತನಿಖೆ ಪ್ರಗತಿ ಹಂತದಲ್ಲಿದೆ ಎಂದರು.

ಕೊಳ್ಳೇಗಾಲ ಪಟ್ಟಣದಿಂದ ಹನೂರು ಪಟ್ಟಣದವರೆಗೆ ಕೇಶಿಪ್ ರಸ್ತೆ ಯೋಜನೆಯಡಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಆದರೆ ಈ ರಸ್ತೆಯಲ್ಲಿ ವಾಹನ ಸವಾರರು ಅತಿ ವೇಗವಾಗಿ ಬರುತ್ತಿರುವುದರಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ವೇಗ ನಿಯಂತ್ರಣ ಮಾಡಲು ಪ್ಲಾಸ್ಟಿಕ್ ಹಮ್ಸ್ ಹಾಗೂ ತೀವ್ರ ತಿರುವು ಇರುವ ಕಡೆ ಜಾಗೃತಿ ನಾಮಫಲಕ, ಸಿಗ್ನಲ್ ಲೈಟ್ ಅಳವಡಿಸಲು ಈಗಾಗಲೇ ಸೂಚನೆ ನೀಡಿದ್ದೇನೆ. ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಇನ್ನಷ್ಟು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಹನೂರು ಪಟ್ಟಣವು ವೇಗವಾಗಿ ಬೆಳೆಯುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆಯೂ ಕೂಡ ಹೆಚ್ಚಾಗುತ್ತಿದೆ. ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿ ಯಾವುದೇ ಅಪಘಾತವಾಗದಂತೆ ಸೂಕ್ತ ಕ್ರಮ ವಹಿಸಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುವುದು. ವಾಹನ ಸವಾರರು ಸಹ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು. ಇನ್ನೊಂದು ಜೀವದ ಜೊತೆ ಚೆಲ್ಲಾಟ ವಾಡಬಾರದು ಎಂದು ಸಲಹೆ ನೀಡಿದರು.

ಪಟ್ಟಣದಲ್ಲಿ ತಾಲೂಕಿನ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ತೆರೆಯಲಾಗಿದೆ. ಆದರೆ ಇಲ್ಲಿ ಯಾವುದೇ ವಹಿವಾಟು ನಡೆಯದೇ ಇರುವುದರಿಂದ ರೈತರುಗಳು ತಾವು ಬೆಳೆದ ಬೆಳೆಗಳನ್ನು ನೆರೆಯ ತಮಿಳುನಾಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅಲ್ಲಿನ ಅವಲಂಬಿಸಿಕೊಂಡಿದ್ದಾರೆ. ನಮ್ಮ ಭಾಗದ ರೈತರಿಗೆ ನಮ್ಮಲ್ಲಿಯೇ ಬೆಂಬಲ ಬೆಲೆ ಕೊಡಿಸಿ ಮಾರುಕಟ್ಟೆ ಪ್ರಾರಂಭ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರಾರಂಭದಲ್ಲಿ ವಾರದ ಒಂದು ದಿನ ಸಂತೆ ಪ್ರಾರಂಭ ಮಾಡಲು ಎಲ್ಲಾ ವ್ಯಾಪಾರಸ್ಥರ ಜೊತೆ ಸಭೆ ನಡೆಸಿ ಸಂತೆ ಪ್ರಾರಂಭಿಸಿ ಹಂತ ಹಂತವಾಗಿ ಎಲ್ಲಾ ರೀತಿಯ ವಹಿವಾಟು ಪ್ರಾರಂಭ ಮಾಡಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ ಎಂದರು.

ಸಂಚಾರ ದಟ್ಟಣೆಗೆ ಕ್ರಮ: ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪದ ಸರ್ಕಲ್ ನಲ್ಲಿ ಅತಿ ಹೆಚ್ಚು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ ವಾಹನ ಸವಾರರು ರಸ್ತೆ ಬದಿಯಲ್ಲಿಯೇ ನಿಲ್ಲಿಸಿ ಹೋಗುವುದರಿಂದ ಹಿಂದೆ ಬರುವ ವಾಹನಗಳಿಗೆ ತೊಂದರೆಯಾಗುತ್ತಿದೆ . ಈ ನಿಟ್ಟಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸರ್ಕಲ್ ನಲ್ಲಿ ಹೆಚ್ಚು ಸಿಬ್ಬಂದಿಗಳನ್ನು ನೇಮಕ ಮಾಡಲು ತಿಳಿಸಲಾಗುವುದು, ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುವವರು ಸಹ ಟ್ರಾಫಿಕ್ ಸಮಸ್ಯೆ ಆಗದಂತೆ ವ್ಯಾಪಾರ ವಹಿವಾಟು ನಡೆಸಬೇಕು ಎಂದರು.

ಈ ವೇಳೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆನಂದ್, ಎಸ್ ಐ ಮಂಜುನಾಥ್ ಪ್ರಸಾದ್ ಮುಖಂಡರಾದ ರಾಜುನಾಯ್ಡು, ಮಂಜೇಶ್, ವಿಜಯ್ ಕುಮಾರ್, ಅತೀಖ್, ಪ್ರಮೋದ್, ಶಾಸಕರ ಆಪ್ತ ಸಹಾಯಕ ಮುರುಗೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags: