Mysore
33
scattered clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಹನೂರು| ಮಲೆ ಮಹದೇಶ್ವರ ಬೆಟ್ಟದಲ್ಲಿ ಅನಧಿಕೃತ ಮಳಿಗೆಗಳ ತೆರವು ಕಾರ್ಯಾಚರಣೆ

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ರಂಗಮಂದಿರದ ಸಮೀಪ ಆನಧಿಕೃತವಾಗಿ ಮಳಿಗೆ ನಡೆಸುತ್ತಿದ್ದ ವ್ಯಾಪಾರಸ್ಥರನ್ನು ಪ್ರಾಧಿಕಾರದ ಕಾರ್ಯದರ್ಶಿ ಎಈ ರಘು ಹಾಗೂ ಸಿಬ್ಬಂದಿ ಇಂದು ಬೆಳಗ್ಗೆ ಕಾರ್ಯಚರಣೆ ಕೈಗೊಂಡು ತೆರವುಗೊಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ರಂಗಮಂದಿರ ಸಮೀಪ 40 ಮಳಿಗೆಗಳಿದ್ದು, 18 ಜನರು ನಿಯಮಾನುಸಾರ ಟೆಂಡರ್ ಪಡೆದು ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟಿ ಅಂಗಡಿ ನಡೆಸುತ್ತಿದ್ದರು. ಆದರೆ 21 ಮಳಿಗೆದಾರರು ಕಳೆದ ಎಂಟು ವರ್ಷಗಳಿಂದ ಅನಧಿಕೃತವಾಗಿ ಮಳಿಗೆಗಳನ್ನು ನಡೆಸುತ್ತಾ ಪ್ರಾಧಿಕಾರದ ನೂರಾರು ಕೋಟಿ ಆದಾಯಕ್ಕೆ ಕುತ್ತು ತಂದಿದ್ದರು.

ಆದರೆ ಇದುವರೆಗೂ ಕರ್ತವ್ಯ ನಿರ್ವಹಿಸಿದ್ದ ಕಾರ್ಯದರ್ಶಿಗಳು ತೆರವು ಮಾಡಲು ಮನಸ್ಸು ಮಾಡಿರಲಿಲ್ಲ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿತ್ತು. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರಕ್ಕೆ ನಷ್ಟವಾಗುತ್ತಿರುವ ಬಗ್ಗೆ ಪ್ರಾಧಿಕಾರದ ಕಾರ್ಯದರ್ಶಿ ಎಈ ರಘುರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ಮಾಡಿ ಹೈಕೋರ್ಟ್‌ನಲ್ಲಿ ಕೆವಿಟ್ ಹಾಕಿ ಹಲವು ರಾಜಕೀಯ ಒತ್ತಡದ ನಡುವೆಯೂ ಕಳೆದ ವಾರ 21 ಅಂಗಡಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿಸಿದ್ದರು.

ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಅನಧಿಕೃತವಾಗಿಟ್ಟುಕೊಂಡಿದ್ದ ಮಳಿಗೆದಾರರು ಅಂಗಡಿಗಳನ್ನು ತೆರವು ಮಾಡದೆ ಇದ್ದಿದ್ದರಿಂದ ಇಂದು ಬೆಳಗ್ಗೆ ಪೊಲೀಸರು, ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ವರ್ಗದವರ ಸಹಯೋಗದಲ್ಲಿ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಇದರಿಂದ ಕಳೆದ ಎಂಟು ವರ್ಷಗಳಿಂದ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೆ ತೆರೆ ಬಿದ್ದಿದೆ.

ಕಳೆದ ಹಲವಾರು ವರ್ಷಗಳಿಂದ 21 ಮಳಿಗೆದಾರರು ಅನಧಿಕೃತವಾಗಿ ವ್ಯಾಪಾರ ಮಾಡುತ್ತಿದ್ದರು. ಇದರಿಂದ ಪ್ರಾಧಿಕಾರಕ್ಕೆ ನಷ್ಟ ಉಂಟಾಗಿದ್ದು, ಈ ಸಂಬಂಧ ಇದ್ದ ಸಮಸ್ಯೆಯನ್ನು ಬಗೆಹರಿಸಿ ಕಳೆದ ವಾರ 21 ಅಂಗಡಿಗಳನ್ನು 11 ತಿಂಗಳ ಅವಧಿಗೆ ೨.೩೪ ಕೋಟಿಗೆ ಹರಾಜು ಮಾಡಲಾಗಿದೆ. ಪ್ರಾಧಿಕಾರದ ಆಸ್ತಿ ಹಾಗೂ ಆದಾಯವನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ ಅದನ್ನು ನಿಭಾಯಿಸಿದ್ದೇನೆ ಎಂದು ಎಈ ರಘು ಸಂತಸ ವ್ಯಕ್ತಪಡಿಸಿದ್ದಾರೆ.

Tags: