ಹನೂರು: ತಾಲ್ಲೂಕಿನ ನಾಲ್‌ರೋಡ್ ಹಾಗೂ ನೆಲ್ಲೂರು ಮಾರ್ಗಮಧ್ಯದ ರಸ್ತೆಯಲ್ಲಿ ಕಾಡಾನೆಯೊಂದು ಹಾಡಹಗಲೇ ರಸ್ತೆ ದಾಟಿ ಹೋಗಿರುವುದು ಪ್ರಯಾಣಿಕರು ಹಾಗೂ ಸುತ್ತಮುತ್ತಲ ಜನರಲ್ಲಿ ಆತಂಕ ಮೂಡಿಸಿದೆ.
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆಯೊಂದು ರಸ್ತೆಯನ್ನು ದಾಟಿದ್ದು, ಈ ಸಮಯದಲ್ಲಿ ಎರಡೂ ಬದಿಗಳಲ್ಲಿ ಬೈಕ್ ಸವಾರರು ಹಾಗೂ ವಾಹನಗಳಲ್ಲಿದ್ದವರು ಕುತೂಹಲದಿಂದ ವಿಡಿಯೋ ಮಾಡಿದ್ದಾರೆ. ಇನ್ನೂ ಕೆಲವರು ಆತಂಕದಲ್ಲಿ ಆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಈ ಸಂಬಂಧ ಸ್ಥಳೀಯರು ಮಾತನಾಡಿ, ಹಾಡಹಗಲೇ ಕಾಡಾನೆ ಮುಖ್ಯ ರಸ್ತೆಯಲ್ಲಿ ಓಡಾಡಿರುವುದು ಭಯ ಉಂಟುಮಾಡಿದೆ. ಬದಲಿ ರಸ್ತೆ ಇಲ್ಲದೆ ಇರುವುದರಿಂದ ಈ ಮಾರ್ಗದಲ್ಲೇ ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗದ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಸಮರ್ಪಕ ಮಳೆಯಾಗದೆ ಇರುವ ಹಿನ್ನೆಲೆಯಲ್ಲಿ ಕೆರೆಕಟ್ಟೆಗಳು ಖಾಲಿಯಾಗಿರುವುದರಿಂದ ಹಾಗೂ ಮರ-ಗಿಡಗಳಲ್ಲಿ ಈಗ ಚಿಗುರು ಬರುತ್ತಿರುವುದರಿಂದ ಆಹಾರದ ಕೊರತೆಯ ಕಾರಣಕ್ಕಾಗಿ ಆನೆ ರಸ್ತೆಗೆ ಬಂದಿರಬಹುದು ಎನ್ನಲಾಗಿದೆ.





